ದಕ್ಷಿಣ ಕನ್ನಡದ ಹೆಸರನ್ನು ಅಳಿಸಬೇಡಿ

ದಕ್ಷಿಣ ಕನ್ನಡ ಎನ್ನುವಲ್ಲಿ ಇರುವ ಹೆಮ್ಮೆಯನ್ನು ರಾಜಿ ಮಾಡಿಕೊಳ್ಳಲು ಸಾಧ್ಯವೇ, ನೀವೇ ಹೇಳಿ.


ಭಾರತದಲ್ಲಿ ಕೆಲವು ಸ್ಥಳನಾಮಗಳು ಪರಂಪರೆ, ಸಂಸ್ಕøತಿ ಮತ್ತು ಸಾಮೂಹಿಕ ಹಿರಿಮೆಯನ್ನು ಸೂಚಿಸುತ್ತವೆ; ಆದರೆ ದಕ್ಷಿಣ ಕನ್ನಡ ಇವೆಲ್ಲವನ್ನೂ ಮೀರಿಸುತ್ತದೆ. ಇದು ಕೇವಲ ಭೌಗೋಳಿಕ ವ್ಯಾಪ್ತಿಯ ಅಧಿಕಾರಶಾಹಿ ದಾಖಲೆಯಲ್ಲಿನ ಹೆಸರಲ್ಲ. ಬದಲಾಗಿ ಜೀವಂತ ಅಸ್ಮಿತೆಯ ಸಂಕೇತವಾಗಿ, ಬಹು ಭಾಷಿಕ, ಬಹು ಧಾರ್ಮಿಕ ಸಂಸ್ಕøತಿಗಳನ್ನು ಪ್ರತಿಬಿಂಬಿಸುವ ಹಾಗೂ ಸಾಂಸ್ಕøತಿಕವಾಗಿ ಶ್ರೀಮಂತ ಜನರಿಂದ ಕೂಡಿದ ಕರಾವಳಿ ಪ್ರದೇಶವಾಗಿದೆ. ಈ ಹೆಸರನ್ನು ಕೈಬಿಡಲು ಯೋಚಿಸುವುದೂ ಸಹ ಸಾಂಸ್ಕøತಿಕ ಗೂಂಡಾಗಿರಿಯಾಗಿಯೇ ಕಾಣುತ್ತದೆ. ಏಕೆಂದರೆ ಈ ಪ್ರಯತ್ನ ನಡೆಯುತ್ತಿರುವುದು ಕೆಲವೇ ಅಂಧಾಭಿಮಾನಿಗಳು ಮತ್ತು ಸಂಕುಚಿತ ಮನಸ್ಸಿನ ಜನರು. ಇವರಿಗೆ ಇತಿಹಾಸವಾಗಲೀ, ವೈವಿಧ್ಯತೆಯಲ್ಲಿ ಏಕತೆಯ ಮೌಲ್ಯವಾಗಲೀ ತಿಳಿದಿಲ್ಲ.

ಇಲ್ಲಿ ಸ್ಪಷ್ಟವಾಗಿ ಹೇಳುವುದಾದರೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಬದಲಿಸಿ ಮಂಗಳೂರು ಅಥವಾ ಕುಡ್ಲ ಎಂದು ನಾಮಕರಣ ಮಾಡುವುದು ಜನಸಾಮಾನ್ಯರ ಆಕಾಂಕ್ಷೆಯೇನಲ್ಲ. ಬದಲಾಗಿ ಇದು ಸಂಕುಚಿತವಾದ, ಪ್ರತ್ಯೇಕತೆಯ ತರ್ಕವಾಗಿದ್ದು, ಈ ಜಿಲ್ಲೆಯನ್ನು ಒಂದು ನಗರಕ್ಕೆ ಅಥವಾ ಒಂದು ಭಾಷಿಕ ಆದ್ಯತೆಗೆ ಸೀಮಿತಗೊಳಿಸುವ ಪ್ರಯತ್ನ. ಇಲ್ಲಿ ದಕ್ಷಿಣ ಕನ್ನಡ ಎನ್ನುವುದು ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರಿ, ಬಂಟ್ವಾಳ, ಉಪ್ಪಿನಂಗಡಿ ಮತ್ತಿತರ ಹತ್ತು ಹನ್ನೆರಡು ಚಲನಶೀಲ ಊರುಗಳು, ಗ್ರಾಮಗಳು ತಮ್ಮದೇ ಆದ ಕೊಡುಗೆಯ ಮೂಲಕ ಪ್ರಸ್ತುತವಾಗುತ್ತವೆ.

ಈ ಹೆಸರನ್ನು ಅಳಿಸಿ ಹಾಕುವುದು ಎಂದರೆ ಕರಾವಳಿಯ ಬಹುತ್ವದ ಚಿಂತನೆಯನ್ನೇ ಕೊನೆಗಾಣಿಸಿದ ಹಾಗೆ. ಇದು ಹಲವು ಪೀಳಿಗೆಗಳ ನೆನಪುಗಳ ಮೇಲೆ ದಾಳಿ ಮಾಡಿದಂತಾಗುತ್ತದೆ. ಈ ಜನರು ತಮ್ಮನ್ನು ದಕ್ಷಿಣ ಕನ್ನಡದವರು ಎಂದೇ ಭಾವಿಸುತ್ತಾರೆಯೇ ಹೊರತು ಮಂಗಳೂರಿಗರು, ತುಳುವರು ಎಂದಲ್ಲ; ಆದರೆ ಕರಾವಳಿ ಜಿಲ್ಲೆಯ ಕನ್ನಡಿಗರು ತಮ್ಮದೇ ಆದ ಸಂಯುಕ್ತ ಅಸ್ಮಿತೆಯ ಭಾವನೆಗಳನ್ನು ಪ್ರಾದೇಶಿಕ ನೆಲೆಯಲ್ಲಿ, ಸಾರ್ವತ್ರಿಕವಾಗಿ ಹೊಂದಿರುತ್ತಾರೆ.

ಈ ಹೆಸರು ಏಕಾಏಕಿ ವಸಾಹತುಶಾಹಿಯ ಆಳ್ವಿಕೆಯಲ್ಲಿ ಮೂಡಿದ್ದಲ್ಲ. ಉದ್ದೇಶಪೂರ್ವಕವಾಗಿ ಜನರು ಎಲ್ಲರನ್ನೂ ಒಳಗೊಳ್ಳುವ ವಿಶಾಲ ಭಾವನೆಯಿಂದ ನೀಡಿದ ಸಾಂಸ್ಕøತಿಕ ಹೆಸರು. ಕರ್ನಾಟಕವು ನಮಗೆ ಹೇಗೆ ಒಂದು ಅಸ್ಮಿತೆಯನ್ನು ನೀಡುವುದೋ, ಹೇಗೆ ಅದು ಮೈಸೂರು ರಾಜ್ಯದ ಸೀಮಿತ ದೃಷ್ಟಿಕೋನದಿಂದ ಹೊರತಂದಿದೆಯೋ, ಹಾಗೆ ದಕ್ಷಿಣ ಕನ್ನಡವೂ ಸಹ. ನಾವು ಕರ್ನಾಟಕವಾಗಿ ರೂಪುಗೊಂಡಾಗ ಇನ್ನೂ ವಿಶಾಲವಾದ, ಉನ್ನತ ಸಾಂಸ್ಕøತಿಕ ಪ್ರದೇಶವಾಗಿ ರೂಪುಗೊಂಡೆವು 'ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್' ಎಂಬಂತೆ, ಎಲ್ಲ ಕನ್ನಡ ಭಾಷಿಕರಿಗೂ ಮತ್ತು ಇತರ ಭಾಷಿಕರಿಗೂ ಇದು ನೆಲೆಯಾಯಿತು. ದಕ್ಷಿಣ ಕನ್ನಡ ಸಹ ಕರಾವಳಿಯ ಒಳಗೊಳ್ಳುವ ಸಾಂಸ್ಕøತಿಕ ಭೂಪ್ರದೇಶವನ್ನು ಒಳಗೊಂಡಿದೆ. ಇದು ಎಲ್ಲ ಸಮುದಾಯಗಳಿಗೂ - ಕನ್ನಡ, ತುಳು, ಕೊಂಕಣಿ, ಬ್ಯಾರಿ ಇತ್ಯಾದಿಗಳಿಗೂ - ಘನತೆ ಮತ್ತು ಅಸ್ತಿತ್ವವನ್ನು ಕಲ್ಪಿಸುತ್ತದೆ.

ಭೌಗೋಳಿಕವಾಗಿ ವಿಶ್ವದತ್ತ ಗಮನಹರಿಸಿದಾಗ, ಈ ಜಿಲ್ಲೆಯ ಜನರು, ಬೆಂಗಳೂರು, ಮುಂಬೈ, ದುಬೈ, ಅಮೆರಿಕಾ ಮುಂತಾದೆಡೆ ನೆಲೆಗೊಂಡಿದ್ದು, ತಮ್ಮನ್ನು ಹೆಮ್ಮೆಯಿಂದ ದಕ್ಷಿಣ ಕನ್ನಡದವರು ಎಂದೇ ಹೇಳಿಕೊಳ್ಳುತ್ತಾರೆ. ಈ ಪದವು ಕೇವಲ ಪ್ರಾದೇಶಿಕವಾಗಿರದೆ ಒಂದು ಗುಣಲಕ್ಷಣದ ಪ್ರತೀಕವಾಗಿ ಪರಿಗಣಿಸಲ್ಪಟ್ಟಿದೆ. ಜ್ಞಾನ, ಬುದ್ಧಿವಂತಿಕೆ, ಶಿಸ್ತು, ಶಿಕ್ಷಣ, ಉದ್ಯಮ ಮತ್ತು ಸಂಸ್ಕøತಿಯ ಕೇಂದ್ರವಾಗಿದೆ. ಬ್ಯಾಂಕಿಂಗ್ ಉದ್ದಿಮೆಯ ಹರಿಕಾರರಾಗಿ ಕೆನರಾ, ಕಾಪೆರ್Çೀರೇಷನ್, ವಿಜಯ, ಸಿಂಡಿಕೇಟ್, ಕರ್ನಾಟಕ ಬ್ಯಾಂಕುಗಳ ಹೊರತಾಗಿ ಅನೇಕ ಸಾಹಿತ್ಯ ದಿಗ್ಗಜರನ್ನು ನಾಡಿಗೆ ಕೊಡುಗೆ ನೀಡಿದೆ. ಕಂಡೆಗೋಡ್ಲು ಶಂಕರ ಭಟ್ಟ, ಎಸ್ ವಿ ಪರಮೇಶ್ವರ ಭಟ್ಟ, ಶಿವರಾಮ ಕಾರಂತ, ಕಯ್ಯಾರ ಕಿಯಿಣ್ಣರೈ, ಪಂಜೆ ಮಂಗೇಶರಾಯ, ಗೋಪಾಲಕೃಷ್ಣ ಅಡಿಗ, ಯು ಆರ್ ಅನಂತಮೂರ್ತಿ, ಬೋಳುವಾರು, ಪುರುಷೋತ್ತಮ ಬಿಳಿಮಲೆ, ವಿವೇಕ ರೈ ಇಂತಹ ಸಾಹಿತಿಗಳನ್ನು, ಯಕ್ಷಗಾನದ ಮೇರು ಕಲಾವಿದರನ್ನು ನೀಡಿರುವ ದಕ್ಷಿಣ ಕನ್ನಡ ಈ ಎಲ್ಲರ ಅಸ್ಮಿತೆಗಳಿಗೆ ಅಡಿಪಾಯವಾಗಿದೆ. 

ಈಗ ಈ ಹೆಸರನ್ನು ಬದಲಿಸುವುದರಿಂದ ಲಾಭ ಯಾರಿಗೆ? ವಿದ್ಯಾರ್ಥಿಗಳು ಇನ್ನೂ ಉತ್ತಮವಾಗಿ ಕಲಿಯುತ್ತಾರೆಯೇ, ರಸ್ತೆಗಳು ದುರಸ್ತಿಯಾಗಿ ವೇಗ ಪಡೆಯುತ್ತವೆಯೇ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆಯೇ ಅಥವಾ ಕುಸಿದಿರುವ ಕೃಷಿ ಮತ್ತು ಕೃಷಿಕರ ಜೀವನವನ್ನು ಮೇಲೆತ್ತುತ್ತದೆಯೇ? ಇದಾವ ಪ್ರಶ್ನೆಗೂ `ಹೌದು' ಎನ್ನುವ ಉತ್ತರವಿದೆಯೇ?

ಈ ಬದಲಾವಣೆಗೆ ಜನಸಮೂಹಗಳು ಆಗ್ರಹಿಸಿಲ್ಲ. ಕೆಲವೇ ರಾಜಕಾರಣಿಗಳು, ಮರುನಾಮಕರಣದ ಹರಿಕಾರರು ಸಂಕೇತಗಳಿಗೆ ಅಂಟಿಕೊಂಡಿರುವುದರ ಫಲ ಇದು. ಇವರು ಸ್ಥಳೀಯ ಭಾವಾವೇಶವನ್ನೇ ಸಾಂಸ್ಕøತಿಕ ಹಿರಿಮೆ ಎಂದು ತಪ್ಪಾಗಿ ಭಾವಿಸುತ್ತಾರೆ. ಪ್ರಾದೇಶಿಕ ನೆಲೆಯಲ್ಲಿ ನಿಂತ ಚಾರಿತ್ರಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ವಾಸ್ತವ ಎಂದರೆ ಇದು ಕೇವಲ ಕೆಲವರ ಹೆಚ್ಚುಗಾರಿಕೆಗಾಗಿ ಹಣೆಪಟ್ಟಿಗಾಗಿಯೇ ಹೊರತು ಅಭಿವೃದ್ಧಿಯ ದೃಷ್ಟಿಯಿಂದಲ್ಲ. 

ದುರಂತ ಎಂದರೆ ಸರ್ಕಾರವೂ ಈ ಒತ್ತಡಗಳಿಗೆ ಮಣಿದರೆ ಅದು ಸಾಂಸ್ಕøತಿಕ ಅವನತಿಗೆ ಕಾರಣವಾಗುತ್ತದೆ. ಸರ್ಕಾರದ ಪಾತ್ರ ಇರುವುದು ತುಡುಗುಪಡೆಗಳ ಬೇಡಿಕೆಗಳನ್ನು ಮನ್ನಿಸಲು ಅಲ್ಲ; ಬದಲಾಗಿ ಕರ್ನಾಟಕವನ್ನು ನಿರ್ವಹಿಸುವ ಸಾಮೂಹಿಕ ಅಸ್ಮಿತೆಗಳನ್ನು ಕಾಪಾಡುವಲ್ಲಿ. ಸರ್ಕಾರವು ಕನ್ನಡ ಭಾಷೆಯನ್ನು ಶಾಲೆಯ ಕಲಿಕಾ ಮಾಧ್ಯಮವಾಗಿ ಉಳಿಸಿಕೊಳ್ಳಲು ಸಿದ್ಧವಾದಂತೆಯೇ ಈಗ ದಕ್ಷಿಣ ಕನ್ನಡ ಎಂಬ ಹೆಸರನ್ನು ಉಳಿಸಿಕೊಳ್ಳಬೇಕಿದೆ. ಏಕೆಂದರೆ ಇದು ಕೇವಲ ಮಂಗಳೂರಿಗೆ ಸೇರಿರುವುದಲ್ಲ. ಇಲ್ಲಿಯ ಪ್ರತಿಯೊಂದು ನದಿ, ಕಡಲತೀರ ಸಮುದಾಯಕ್ಕೇ ಸೇರಿರುವುದು.

ದಕ್ಷಿಣ ಕನ್ನಡ ಎನ್ನುವಲ್ಲಿ ಇರುವ ಹೆಮ್ಮೆಯನ್ನು ರಾಜಿ ಮಾಡಿಕೊಳ್ಳಲು ಸಾಧ್ಯವೇ, ನೀವೇ ಹೇಳಿ. ಸರ್ಕಾರವು ಸ್ಪಷ್ಟವಾದ ಸಂದೇಶವನ್ನು ಕಳುಹಿಸಲಿ. ಸಂಕುಚಿತ ರಾಜಕೀಯಕ್ಕಾಗಿ ಅಸ್ಮಿತೆಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಸಂಕಲ್ಪ ಮಾಡಬೇಕಿದೆ. ನಮ್ಮ ಚರಿತ್ರೆಯನ್ನು ಗೌರವಿಸಿ, ವೈವಿಧ್ಯತೆಯನ್ನು ಒಪ್ಪಿಕೊಂಡು, ನಮ್ಮದಾಗಿರುವ ಎಲ್ಲವನ್ನೂ ಉಳಿಸಿಕೊಳ್ಳುವ ಮೂಲಕ ಘನತೆವೆತ್ತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಚಾರಿತ್ರಿಕ ಹೆಸರಾದ ದಕ್ಷಿಣ ಕನ್ನಡವನ್ನು ಉಳಿಸಿಕೊಳ್ಳಲು ದೃಢ ನಿಶ್ಚಯ ಮಾಡಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again