ಸರ್ಕಾರದ ನಿರ್ಲಕ್ಷ್ಯ, ರಾಜಕೀಯ ಮಸಲತ್ತಿಗೆ ಕನ್ನಡ ಸಾಹಿತ್ಯ ಪರಿಷತ್ ಬಲಿ
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಜನತೆಗೆ ಸೇರಿದ ಆಸ್ತಿಯೇ ಹೊರತು, ಕೆಲವು ಕಾರ್ಯಸೂಚಿ ಪ್ರೇರಿತ ಸಾಹಿತಿ ಬರಹಗಾರರಿಗೆ, ಅಧಿಕಾರ ದಾಹದ ರಾಜಕೀಯ ಗುಂಪುಗಳಿಗೆ ಸೇರಿದ್ದಲ್ಲ.
ಶತಮಾನದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕರ್ನಾಟಕದ ಜನತೆಯ, ಕನ್ನಡಿಗರ ಸಾಂಸ್ಕøತಿಕ, ಸಾಹಿತ್ಯಿಕ ಪ್ರಜ್ಞೆಯಾಗಿ ತನ್ನದೇ ಆದ ಘನತೆ ಉಳಿಸಿಕೊಂಡಿದೆ. ಆದರೆ ಇಂದು ಈ ಸಾಂಸ್ಕೃತಿಕ ಸಂಸ್ಥೆಯನ್ನು ಹಂತಹಂತವಾಗಿ ಛಿದ್ರಗೊಳಿಸಲಾಗುತ್ತಿದೆ. ಇದು ಆಂತರಿಕ ಪಿತೂರಿ ಮತ್ತು ಸರ್ಕಾರದ ಬೆಂಬಲದೊಂದಿಗೆ ಆಗಿರುವ ಅನಾಹುತ. ಕನ್ನಡ ಸಾಹಿತ್ಯವನ್ನು ಮೇರು ಸ್ತರಕ್ಕೆ ಎತ್ತರಿಸಲು ಒಂದು ವೇದಿಕೆಯಾಗಿದ್ದ ಸಾಹಿತ್ಯ ಪರಿಷತ್ತು ಈ ವೈಯುಕ್ತಿಕ ಅಹಮಿಕೆ, ಗುಂಪುಗಾರಿಕೆ ಮತ್ತು ರಾಜಕೀಯ ತಂತ್ರಗಾರಿಕೆಯ ರಣರಂಗವಾಗಿದೆ.
ಈ ಬಿಕ್ಕಟ್ಟಿನ ಕೇಂದ್ರ ಬಿಂದು ಆಗಿರುವುದು ಹಾಲಿ ಪರಿಷತ್ತಿನ ನಾಯಕತ್ವವನ್ನು ಅಸ್ಥಿರಗೊಳಿಸುವ ಉದ್ದೇಶಪೂರಿತ ಪ್ರಯತ್ನಗಳು. ಹಾಲಿ ಅಧ್ಯಕ್ಷರು ತಮ್ಮ ನ್ಯಾಯಯುತವಾದ ಕರ್ತವ್ಯವನ್ನು ಪಾಲಿಸಲು ಅವಕಾಶ ನೀಡದೆ ಅವರನ್ನು ಬೆನ್ನತ್ತಿ, ಕಿರುಕುಳ ನೀಡಿ ಚಿತ್ರಹಿಂಸೆಗೊಳಪಡಿಸಲಾಗುತ್ತಿದೆ. ಇದು ಕೇವಲ ತಮ್ಮದೇ ಆದ ದುರುದ್ದೇಶ ಇರುವ ಸಾಹಿತ್ಯಿಕ ವ್ಯಕ್ತಿಗಳಿಂದ ಮಾತ್ರವಲ್ಲದೆ, ಸಂಸ್ಥೆಯ ಪಾವಿತ್ರ್ಯತೆಯನ್ನು ಉಳಿಸುವ ಜವಾಬ್ದಾರಿ ಇರುವ ಸರ್ಕಾರದಿಂದಲೂ ನಡೆಯುತ್ತಿದೆ. ಇದು ಕೇವಲ ಆಡಳಿತಾತ್ಮಕ ಬಂಡಾಯ ಅಲ್ಲ, ಬದಲಾಗಿ ಸಾಂಸ್ಕೃತಿಕ ವಿಶ್ವಾಸದ್ರೋಹದ ಪರಮಾವಧಿ.
ಈ ಇಡೀ ಪ್ರಕರಣದಲ್ಲಿ ಸರ್ಕಾರದ ಪಾತ್ರ ಇರುವುದು ದುರದೃಷ್ಟಕರ. ತಟಸ್ಥ ನ್ಯಾಯ ಪರಿಹಾರಕ ಸ್ಥಾನದಲ್ಲಿರುವುದರ ಬದಲು, ಸರ್ಕಾರವು ಭಿನ್ನ ಬಣಗಳ ಪರ ನಿಂತಿದ್ದು, ಸಾಹಿತ್ಯಿಕ ಕ್ರಿಯಾಶೀಲತೆಯ ಮುಖವಾಡ ಹೊತ್ತ ಭಗ್ನ ಶಕ್ತಿಗಳೊಡನೆ ಕೈಜೋಡಿಸಿದೆ. ಪರಿಷತ್ತಿನ ಅಧ್ಯಕ್ಷರಿಗೆ ಸಚಿವ ಸಂಪುಟದ ಸ್ಥಾನವನ್ನು ಕಸಿದುಕೊಳ್ಳುವ ಮೂಲಕ ಸರ್ಕಾರವು ವ್ಯಕ್ತಿಯನ್ನು ಅಪಮಾನಿಸಿರುವುದಷ್ಟೇ ಅಲ್ಲದೆ ಸಂಸ್ಥೆಯ ಘನತೆಗೂ ಹಾನಿ ಉಂಟುಮಾಡಿದೆ. ಇನ್ನೂ ಗಾಬರಿ ಉಂಟುಮಾಡುವ ಸಂಗತಿ ಎಂದರೆ, ಸರ್ಕಾರವು ಸಂಸ್ಥೆಯ ಅಧ್ಯಕ್ಷರ ವಿವೇಚನಾಧಿಕಾರವನ್ನು ರಕ್ಷಿಸಲು ನ್ಯಾಯಾಂಗದ ಆದೇಶವಾಗಿದ್ದರೂ ಅದನ್ನೂ ಉಲ್ಲಂಘಿಸುತ್ತಿರುವುದು. ಇದು ಗಂಭೀರವಾದ ಸಾಂವಿಧಾನಿಕ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ. ನ್ಯಾಯಾಂಗದ ಆದೇಶವನ್ನು ಹೀಗೆ ಅಲಕ್ಷಿಸಬಹುದಾದರೆ, ರಾಜಕೀಯವಾಗಿ ಪ್ರಕ್ಷುಬ್ಧಗೊಂಡಿರುವ ವಾತಾವರಣದಲ್ಲಿ ಈ ಸಾಹಿತ್ಯ ಸಂಸ್ಥೆಗೆ ನ್ಯಾಯ ಎಲ್ಲಿ ದೊರೆಯುತ್ತದೆ?
ಪರಿಷತ್ತಿನ ಸುಪರ್ದಿಯಲ್ಲಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಿಂದ ಈ ಕುಸಿತ ಆರಂಭವಾಗಿದೆ. ಈ ಸಮ್ಮೇಳನದಲ್ಲಿ ಆಹಾರದ ಆಯ್ಕೆಯ ಪ್ರಶ್ನೆ ಮುಂದಿಟ್ಟುಕೊಂಡು ಇಡೀ ಸಮ್ಮೇಳನವನ್ನು ಹೈಜಾಕ್ ಮಾಡಲು ಯತ್ನಿಸಲಾಯಿತು. ಸಸ್ಯಾಹಾರ-ಮಾಂಸಾಹಾರದ ನಡುವಿನ ಸಂಘರ್ಷದಲ್ಲಿ ಸಮ್ಮೇಳನದ ಸಾಹಿತ್ಯಕ ವೈಭವ ಕಣ್ಮರೆಯಾಗಿ ಪಟ್ಟಭದ್ರ ಹಿತಾಸಕ್ತಿಗಳ ರಣರಂಗವಾಗಿ ಮಾರ್ಪಟ್ಟಿತ್ತು. ತನ್ನ ಸಾಹಿತ್ಯಿಕ ಪರಂಪರೆಯನ್ನು ಕರ್ನಾಟಕವು ಗೌರವಿಸಬೇಕಾದ ಮಾದರಿ ಇದಲ್ಲ. ಅದನ್ನು ಅಪಮಾನಗೊಳಿಸುವ ಮಾದರಿಯಾಗಿದೆ.
ಸರ್ಕಾರಕ್ಕೆ ಪರಿಸ್ಥಿತಿಯನ್ನು ತಹಬಂದಿಗೆ ತರಲು ಇಷ್ಟವಿಲ್ಲದಿದ್ದರೆ, ಸಾಧ್ಯವಾಗದೆ ಇದ್ದರೆ, ಎರಡು ಪರಿಹಾರ ಮಾರ್ಗಗಳನ್ನು ಅನುಸರಿಸಬಹುದು. ಮೊದಲನೆಯದು ರಾಜಕೀಯ-ಸೈದ್ಧಾಂತಿಕ ಹಸ್ತಕ್ಷೇಪಗಳಿಂದ ಪರಿಷತ್ತನ್ನು ಮುಕ್ತಗೊಳಿಸುವುದು ಮತ್ತು ಹಾಲಿ ಪರಿಷತ್ತಿನ ರಚನೆಯನ್ನು ವಿಸರ್ಜಿಸಿ ಸೂಕ್ತ ಉತ್ತರದಾಯಿತ್ವದೊಂದಿಗೆ, ನಿಯಮಬದ್ಧವಾಗಿ ಪುನರ್ ನಿರ್ಮಾಣ ಮಾಡುವುದು. ಎರಡನೆಯದಾಗಿ ತುರ್ತು ಅವಶ್ಯವಾಗಿರುವ ಕ್ರಮ ಎಂದರೆ, ರಾಜಿಯಾಗದ ಪ್ರಾಮಾಣಿಕತೆ ಇರುವ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿ ಗಂಭೀರ ತನಿಖೆ ನಡೆಸುವುದು. ಇಲ್ಲಿ ಸತ್ಯವನ್ನು ಹೊರಗೆಡಹಬೇಕಿದೆ. ಸೂತ್ರಧಾರರು ಯಾರಿದ್ದಾರೆ, ಯಾರು ಹಣ ದುರುಪಯೋಗ ಮಾಡುತ್ತಿದ್ದಾರೆ, ಯಾರು ನ್ಯಾಯಾಂಗದ ಆದೇಶಗಳನ್ನು ಉಲ್ಲಂಘಿಸುತ್ತಿದ್ದಾರೆ ಎಲ್ಲವೂ ಹೊರಬರಬೇಕು.
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಜನತೆಗೆ ಸೇರಿದ ಆಸ್ತಿಯೇ ಹೊರತು, ಕೆಲವು ಕಾರ್ಯಸೂಚಿ ಪ್ರೇರಿತ ಸಾಹಿತಿ ಬರಹಗಾರರಿಗೆ, ಅಧಿಕಾರ ದಾಹದ ರಾಜಕೀಯ ಗುಂಪುಗಳಿಗೆ ಸೇರಿದ್ದಲ್ಲ. ಈಗ ಕ್ರಮ ಕೈಗೊಳ್ಳದೆ ಹೋದರೆ, ಬಹುಶಃ ನಾವು ಸಂಸ್ಥೆಯನ್ನಷ್ಟೇ ಅಲ್ಲದೆ ಅದರ ಪರಂಪರೆಯನ್ನೂ ಕಳೆದುಕೊಳ್ಳುತ್ತೇವೆ.
ಇದು ಸಾಹಿತ್ಯಿಕ ಬಿಕ್ಕಟ್ಟು ಅಲ್ಲ, ನೈತಿಕ ತುರ್ತು.

Comments
Post a Comment