ಐಎಎಸ್ ಅಧಿಕಾರಿಗಳ ಸಂಘದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ

ಐಎಎಸ್ ಅಧಿಕಾರಿಗಳ ಸಂಘವು ರಾಜಕೀಯ ವಾತಾವರಣದ ಭಾಗವಾಗಿದೆಯೇ, ತನಗೆ ಅನುಕೂಲಕರವಾದಾಗ ಮಾತ್ರ ಮಾತನಾಡುತ್ತದೆಯೇ?


ಇತ್ತೀಚೆಗೆ ಬಿಜೆಪಿ ಎಮ್‍ಎಲ್‍ಸಿ ರವಿಕುಮಾರ್ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆ ಸಾಕಷ್ಟು ಚರ್ಚೆಗೊಳಗಾಗಿದ್ದು, ಸಹಜವಾಗಿ ಆಡಳಿತ ವಲಯದಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಸಾರ್ವಜನಿಕ ಪ್ರತಿನಿಧಿಗಳು ವ್ಯಂಗ್ಯ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿ ಹಿರಿಯ ನಾಗರಿಕ ಸೇವಾ ಅಧಿಕಾರಿಗಳನ್ನು, ಅದರಲ್ಲೂ ಸಾಂವಿಧಾನಿಕ ಹುದ್ದೆಯಲ್ಲಿರುವ ಮಹಿಳೆಯನ್ನು ಅಪಮಾನಿಸುವುದು ಸರ್ವಥಾ ಒಪ್ಪುವಂತಹುದಲ್ಲ. ಇದಕ್ಕೆ ಸ್ಪಷ್ಟವಾದ, ಕ್ಷಿಪ್ರ ಪ್ರತಿಕ್ರಿಯೆ, ಖಂಡನೆ ಅಗತ್ಯ. ಈ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಗಳ ಸಂಘವು ರವಿಕುಮಾರ್ ಅವರ ಹೇಳಿಕೆಯನ್ನು ಖಂಡಿಸಿ, ಇದು ಅವರ ಹುದ್ದೆಗೆ ಶೋಭೆ ತರುವಂತಹುದಲ್ಲ ಎಂದು ಹೇಳಿರುವುದೇ ಅಲ್ಲದೆ, ರವಿಕುಮಾರ್ ಅವರ ಉತ್ತರದಾಯಿತ್ವಕ್ಕಾಗಿ ಆಗ್ರಹಿಸಿದೆ.

ಆದರೆ ಇಲ್ಲಿ ಗಮನಕ್ಕೆ ಬಾರದೆ ಹೋದ ಸಂಗತಿ ಎಂದರೆ, ಇದೇ ಸಂಘಟನೆಯು ಹಿಂದಿನ ಎರಡು ಘಟನೆಗಳ ಬಗ್ಗೆ ಮೌನ ವಹಿಸಿದ್ದುದು. ಇದಕ್ಕಿಂತಲೂ ಹೀನ, ಗಂಭೀರವಾದ ಈ ಎರಡು ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳೇ ಭಾಗಿಯಾಗಿದ್ದರು, ಆದರೆ ಇದೇ ರೀತಿಯ ಸಾಂಸ್ಥಿಕ ಸ್ಪಂದನೆಯಾಗಲೀ, ಪ್ರತಿಕ್ರಿಯೆಯಾಗಲೀ ವ್ಯಕ್ತವಾಗಲಿಲ್ಲ. ನಾಗರಿಕ ಸೇವಾ ಅಧಿಕಾರಿಗಳ ಘನತೆ ಗೌರವವನ್ನು ಕಾಪಾಡುವುದು ಎಲ್ಲರಿಗೂ ಅನ್ವಯಿಸುವುದಾದರೆ ಅದನ್ನು ನಿಷ್ಪಕ್ಷಪಾತವಾಗಿ ರಕ್ಷಿಸಬೇಕು. ಈ ನೈತಿಕ ನಿಯಮ ಬಹುಶಃ ಬೇಕಾದಾಗ ಮಾತ್ರ ಪ್ರತಿಕ್ರಿಯಿಸುವ ನಡತೆಯಲ್ಲಿ ಕಳೆದುಹೋದಂತಿದೆ.

ಎರಡು ಘಟನೆಗಳನ್ನೊಮ್ಮೆ ನೋಡೋಣ.

2025ರ ಮಾರ್ಚ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪಷ್ಟವಾಗಿ ಗೋಚರಿಸುವಂತೆಯೇ ಕುಪಿತರಾಗಿ, ಬೆಳಗಾವಿಯ ಹೆಚ್ಚುವರಿ ಎಸ್‍ಪಿ ಮಹಂತೇಶ್ ಅವರತ್ತ ದಾಳಿ ಮಾಡುವ ರೀತಿಯಲ್ಲಿ ಧಾವಿಸಿದ್ದರು. ಇದು ಕೆಎಮ್‍ಎಫ್ ಸಭೆಯೊಂದರ ರಕ್ಷಣಾ ವ್ಯವಸ್ಥೆಯನ್ನು ಕುರಿತ ವಿಚಾರವಾಗಿತ್ತು. ಈ ಘಟನೆಯ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ, ಮುಖ್ಯಮಂತ್ರಿಗಳು ಬೆದರಿಸುವ ರೀತಿಯಲ್ಲಿ ಕೈ ಎತ್ತಿದ್ದು ಮತ್ತು ಅಲ್ಲಿ ಬಳಸಲಾದ ಮಾತುಗಳು ನಿಂದನಾತ್ಮಕವಾಗಿದ್ದವು. ಇದೇ ವರ್ತನೆಯನ್ನು ಇನ್ನೂ ಕೆಳಸ್ತರದ  ಯಾರಾದರೂ ತೋರಿದ್ದರೆ ಎಫ್‍ಐಆರ್ ಖಚಿತವಾಗಿ ದಾಖಲಾಗುತ್ತಿತ್ತು.  ಆದರೆ ಈ ಘಟನೆಯಲ್ಲಿ ಕ್ಷಮಾಪಣೆಯ ಸುಳಿವೂ ಇರಲಿಲ್ಲ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಂಘಟನೆಗಳು, ಕಾಯಾರ್ಂಗದ ಬೆದರಿಕೆಯ ಹೊರತಾಗಿಯೂ ಮೌನವಾಗಿದ್ದವು.

ಮತ್ತೊಂದು ಪ್ರಸಂಗದಲ್ಲಿ 2025ರ ಜನವರಿಯಲ್ಲಿ ಸಿದ್ದರಾಮಯ್ಯ ಸಾರ್ವಜನಿಕವಾಗಿಯೇ ವಿಜಯನಗರದ ಉಪ ಆಯುಕ್ತ ಎಮ್ ಎಸ್ ದಿವಾಕರ್ ಅವರನ್ನು ಖಾಸಗಿ ವಿವಾಹದ ಸಂದರ್ಭವೊಂದರಲ್ಲಿ ಅವಮಾನಿಸಿದ್ದರು. ಸಾರ್ವಜನಿಕರ ಸಮ್ಮುಖದಲ್ಲೇ "ನೀನು ಯಾರು? ಇಲ್ಲೇಕೆ ಕುಳಿತುಕೊಂಡಿದ್ದೀಯ, ಬೇರೆ ಕಡೆ ಹೋಗಿ ಕುಳಿತುಕೋ" ಎಂದು ಜೋರು ದನಿಯಲ್ಲಿ ಹೇಳಿದ್ದರು. ಒಬ್ಬ ಹಿರಿಯ ಐಎಎಸ್ ಅಧಿಕಾರಿಯನ್ನು ತಪ್ಪು ಮಾಡಿದ ಗುಮಾಸ್ತನ ರೀತಿಯಲ್ಲಿ ನಡೆಸಿಕೊಳ್ಳಲಾಯಿತು. ಇದು ಅವರ ಹುದ್ದೆಯ ಘನತೆ ಗೌರವಗಳಿಗೆ ಧಕ್ಕೆ ಉಂಟುಮಾಡುವಂತಿತ್ತು. ಇಲ್ಲಿಯೂ ಸಹ ಐಎಎಸ್ ಅಧಿಕಾರಿಗಳ ಸಂಘ ಮೌನ ವಹಿಸಿತ್ತು. ಯಾವುದೇ ಹೇಳಿಕೆಯನ್ನೂ ನೀಡಲಿಲ್ಲ, ಸಾಂಸ್ಥಿಕ ಐಕ್ಯತೆಯ ನಡತೆಯನ್ನೂ ತೋರಲಿಲ್ಲ. ಮೌನವಾಗಿ ಮುಜುಗರವನ್ನು ಸಹಿಸಿಕೊಂಡಿತ್ತು.

ಈ ಎರಡು ಪ್ರಕರಣಗಳನ್ನು ಹಾಲಿ ಪ್ರಕರಣದೊಂದಿಗೆ ಹೋಲಿಸಿದಾಗ, ಬಿಜೆಪಿ ಎಮ್‍ಎಲ್‍ಸಿಯ ಅವಹೇಳನಕಾರಿ, ಖಂಡನಾರ್ಹ ಹೇಳಿಕೆಯು ಐಎಎಸ್ ಅಧಿಕಾರಿಗಳ ಸಂಘದಿಂದ ಕೂಡಲೇ ಖಂಡನೆಗೊಳಗಾಗಿದ್ದು ಪೆÇಲೀಸ್ ಎಫ್‍ಐಆರ್ ಸಹ ದಾಖಲಿಸಲಾಗಿದೆ. ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿದ್ದು ನೈತಿಕ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. ಈ ತಾರತಮ್ಯ ನೀತಿ ಅಚ್ಚರಿದಾಯಕವಷ್ಟೇ ಅಲ್ಲದೆ, ಖಂಡನೀಯವೂ ಹೌದು.

ಇಲ್ಲಿ ನೇರವಾಗಿ ಕೇಳಬಹುದಾದ ಪ್ರಶ್ನೆ ಎಂದರೆ, ಐಎಎಸ್ ಅಧಿಕಾರಿಗಳ ಸಂಘವು ರಾಜಕೀಯ ವಾತಾವರಣದ ಭಾಗವಾಗಿದೆಯೇ, ತನಗೆ ಅನುಕೂಲಕರವಾದಾಗ ಮಾತ್ರ ಮಾತನಾಡುತ್ತದೆಯೇ ಎನ್ನುವುದು. ಹಾಲಿ ಮುಖ್ಯಮಂತ್ರಿಯನ್ನು ಖಂಡಿಸುವುದು ಮುಜುಗರ ಉಂಟುಮಾಡಬಹುದು. ವಿರೋಧ ಪಕ್ಷದ ಎಮ್‍ಎಲ್‍ಸಿಯನ್ನು ಖಂಡಿಸುವುದು ಸುಲಭ, ಅಪಾಯವಿಲ್ಲದ ಕ್ರಿಯೆ ಎನಿಸಬಹುದು. ಆದರೆ ಈ ರೀತಿ ಬೇಕೆನಿಸಿದಾಗ ಧೈರ್ಯ ತೋರುವುದು ನಿಜಾರ್ಥ ಪ್ರತಿಕ್ರಿಯೆ ಎನ್ನಲಾಗುವುದಿಲ್ಲ. ಎಲ್ಲ ಪ್ರಕರಣಗಳಲ್ಲೂ ಸಮಾನವಾಗಿ ಸೇವಾ ಅಧಿಕಾರಿಗಳ ಘನತೆಯೇ ಮುಖ್ಯವಾಗಬೇಕು.

ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈ ತಾರತಮ್ಯವನ್ನು ಸರಿಯಾಗಿಯೇ ಪ್ರಶ್ನಿಸಿದ್ದಾರೆ. ಸಂಘಟನೆಯು ರಾಜಕೀಯ ಮೈತ್ರಿಯಿಂದ ಹೆಚ್ಚು ಪ್ರಭಾವಿತವಾಗಿದೆ, ಸಾಂಸ್ಥಿಕ ಕರ್ತವ್ಯದಿಂದ ಅಲ್ಲ ಎಂಬ ಅವರ ಆರೋಪ ಆತ್ಮಾವಲೋಕನಕ್ಕೆ ಎಡೆಮಾಡಿಕೊಡುತ್ತದೆ. ಮುಖ್ಯ ಕಾರ್ಯದರ್ಶಿಯ ಗೌರವ ಸಾಮೂಹಿಕ ರಕ್ಷಣೆಗೆ ಪಾತ್ರವಾದರೆ, ಜಿಲ್ಲಾಧಿಕಾರಿ ಅಥವಾ ಹೆಚ್ಚುವರಿ ಎಸ್‍ಪಿ ಅವರ ಗೌರವಕ್ಕೂ ರಕ್ಷಣೆ ಸಲ್ಲಬೇಕು. ಆಕ್ರೋಶದ ಶ್ರೇಣೀಕರಣವು ರಾಜಕೀಯ ಅಧಿಕಾರದ ಶ್ರೇಣಿಯನ್ನು ಅವಲಂಬಿಸುವುದು ತರವಲ್ಲ.

ನಾಗರಿಕ ಸೇವಾ ಸಂಘಟನೆಗಳು ತಟಸ್ಥ ನೀತಿ ಮತ್ತು ಸಾಂಸ್ಥಿಕ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುತ್ತವೆ. ಈ ಸಂಘಟನೆಗಳು ಕಾಯಾರ್ಂಗದ ಅತಿರೇಕಗಳಿಗೆ ಮೌನ ವಹಿಸುವುದು ಮತ್ತು ತನ್ನ ನಿಲುವಿಗೆ ತಕ್ಕಂತೆ ಪ್ರತಿಕ್ರಿಯಿಸಿ ಆಕ್ರೋಶ ವ್ಯಕ್ತಪಡಿಸುವುದು, ಈ ಅಧಿಕಾರಿಗಳ ಸಂಘ ಎತ್ತಿಹಿಡಿಯುವ ನೈತಿಕ ನೆಲೆಯನ್ನೇ ಭಂಗಗೊಳಿಸುತ್ತದೆ.

ಐಎಎಸ್ ಅಧಿಕಾರಿಗಳ ಸಂಘವು ಸಾರ್ವಜನಿಕವಾಗಿ ತನ್ನ ಗೌರವವನ್ನು, ಸದಸ್ಯರ ಘನತೆಯನ್ನು ಉಳಿಸಿಕೊಳ್ಳುವುದೇ ಆದರೆ, ಅದು ದ್ವಂದ್ವ ನೀತಿಯಿಂದ ಮುಕ್ತವಾಗಿರಬೇಕು. ರವಿಕುಮಾರ್ ಅವರನ್ನು ಖಂಡಿಸುವುದು ಸರಿ, ಆದರೆ ಮುಖ್ಯಮಂತ್ರಿಗಳ ಹಿಂದಿನ ವರ್ತನೆಯನ್ನೂ ಎದುರಿಸುವುದು ಮುಖ್ಯ. ಇಲ್ಲವಾದಲ್ಲಿ ನೈತಿಕ ಬೇಜವಾಬ್ದಾರಿಯಾಗಿ ಕಾಣುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again