ವಯೋಮಿತಿ ದಾಟಿದ ರಾಜಕಾರಣಿಗಳು ನಿವೃತ್ತರಾಗುವುದು ಅಗತ್ಯ

ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ವಿಶ್ರಾಂತ ಜೀವನ ಸಾಗಿಸಬೇಕಾದ ವಯೋವೃದ್ಧ ರಾಜಕಾರಣಿಗಳ ಹಪಾಹಪಿತನದಿಂದ ಬಲಿಯಾಗುವುದು ಕ್ರಿಯಾಶೀಲ ಯುವಶಕ್ತಿ


ಬಹುತೇಕ ವೃತ್ತಿಗಳಲ್ಲಿ ವಯೋಮಿತಿ ಒಂದು ಅಂತ್ಯ ಘಟ್ಟವನ್ನು ತಲುಪಿಸಿದಂತೆ. ಕ್ರೀಡಾಪಟುಗಳು 40 ವರ್ಷಕ್ಕೆ, ನ್ಯಾಯಾಧೀಶರು 65ಕ್ಕೆ, ಅಧಿಕಾರಿಗಳು 60ಕ್ಕೆ ನಿವೃತ್ತಿ ಹೊಂದುತ್ತಾರೆ. ಆದರೆ ಭಾರತದ ರಾಜಕಾರಣದಲ್ಲಿ ನಿವೃತ್ತಿ ಎನ್ನುವುದೇ ಒಂದು ಅಪವಾದ. ಭಾರತದಲ್ಲಿ ಮತ್ತು ಕರ್ನಾಟಕದಾದ್ಯಂತ ಒಂದು ಪ್ರಕ್ಷುಬ್ಧ ಮಾದರಿಯನ್ನು ಕಾಣಬಹುದು. ವಯಸ್ಸಾದ ರಾಜಕಾರಣಿಗಳು ಅವರ ಶಕ್ತಿ ಸಾಮಥ್ರ್ಯಗಳನ್ನು ಕಳೆದುಕೊಂಡಿದ್ದರೂ, ಸಾರ್ವಜನಿಕ ಜೀವನಕ್ಕೆ ಆತುಕೊಂಡಿರುತ್ತಾರೆ. ಅನಗತ್ಯವಾದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲಿ ಎಂಬ ಹಂಬಲವಷ್ಟೇ ಅಲ್ಲದೆ ತಮಗೆ ಮತ್ತೆ ಅಧಿಕಾರ ಕೊಡಲಿ ಎಂಬ ಆಕಾಂಕ್ಷೆ ಹೊಂದಿರುತ್ತಾರೆ. ಯುವ ಶಕ್ತಿಯಿಂದ ತುಂಬಿ ತುಳುಕುತ್ತಿರುವ ದೇಶದಲ್ಲಿ ರಾಜಕೀಯ ಆಕಾಂಕ್ಷೆಗಳೂ ಅಗಾಧವಾಗಿರುವಾಗ ಸಾರ್ವಜನಿಕ ಸಂವಾದವನ್ನು ಈಗಲೂ 80 ದಾಟಿದ ವಯೋವೃದ್ಧ ರಾಜಕಾರಣಿಗಳೇ ನಿರೂಪಿಸುವುದು ದುರದೃಷ್ಟಕರವಷ್ಟೇ ಅಲ್ಲ, ದುರಂತವೂ ಹೌದು.

ಉದಾಹರಣೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 92 ವರ್ಷ ಪೂರೈಸಿದ್ದಾರೆ. ಒಮ್ಮೆ ಪ್ರಧಾನಿಯಾಗಿ ಈ ಅಂಚಿಗೆ ದೂಡಲ್ಪಟ್ಟಿದ್ದಾರೆ. ಆದರೂ ಆಗಾಗ್ಗೆ ಅವರು ರಾಜಕೀಯ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸುವ ಸಲುವಾಗಿ ನೀಡುತ್ತಲೇ ಇರುತ್ತಾರೆ. ಅವರ ಜೆಡಿಎಸ್ ಪಕ್ಷವು ಕುಸಿಯುತ್ತಿದ್ದು ಅವರ ಪ್ರಸ್ತುತತೆಯೇ ಅನಗತ್ಯವಾಗುತ್ತಿರುವಾಗಲೂ ಇದೇ ಧೋರಣೆಯಲ್ಲಿ ನಡೆದಿದ್ದಾರೆ. ಆದರೂ ಇದನ್ನು ಲೆಕ್ಕಿಸದ ಹಿರಿಯ ಗೌಡರು ಹಿನ್ನಲೆಗೆ ಸರಿಯಲು ಒಪ್ಪದೆ ತಮ್ಮ ಮಾತುಗಳು ರಾಜಕೀಯ ಪರಿಸ್ಥಿತಿಗಳನ್ನು ನಿರೂಪಿಸುತ್ತವೆ ಎಂಬ ಭ್ರಮೆಯಲ್ಲಿದ್ದಾರೆ.

ಮಾಜಿ ಸಂಸದ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗ 82 ದಾಟಿದ್ದಾರೆ. ಅಧಿಕೃತವಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತರಾಗಿದ್ದರೂ ಬಿಜೆಪಿಯ ದೈನಂದಿನ ದಿಕ್ಕು-ದೆಸೆ ಬಗ್ಗೆ ಹೇಳಿಕೆಗಳನ್ನು ನೀಡುತ್ತ ಕರ್ನಾಟಕದ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಪಕ್ಷದ ಒಳಗೆ ಹೊಸ ತಲೆಮಾರಿಗೆ ನಾಯಕತ್ವವನ್ನು ಹಸ್ತಾಂತರ ಮಾಡಿದ್ದರೂ ಸಹ ಯಡಿಯೂರಪ್ಪ ಅವರ ಆಕಾಂಕ್ಷೆ ಮತ್ತು ಮಹತ್ವದ ಸ್ಥಾನಮಾನಗಳ ಹಂಬಲ ಇನ್ನೂ ತೀರದ ಕಾರಣ ದೂರ ಸರಿಯಲು ಹಿಂಜರಿಯುತ್ತಿದ್ದಾರೆ. ಈಗಲೂ ಹಳೆಯ ಕತೆಯನ್ನೇ ಹೇಳುತ್ತಾರೆಯೇ ಹೊರತು, ಹೊಸತೇನೂ ಹೇಳುವುದಿಲ್ಲ.

ಇನ್ನಿಬ್ಬರು 80 ದಾಟಿದ ನಾಯಕರು ಕರಾವಳಿ ಕರ್ನಾಟಕದ ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯ ಡಿ ವಿ ಸದಾನಂದಗೌಡ. ಇಬ್ಬರೂ ಮಾಜಿ ಮುಖ್ಯಮಂತ್ರಿಗಳು. ಮೊಯ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್ ಸಿದ್ಧಾಂತಿಯಾಗಿ, ನೀತಿ ನಿರೂಪಕರಾಗಿದ್ದವರು ಈಗಲೂ ರಾಷ್ಟ್ರ ಮಟ್ಟದಲ್ಲಿ ವ್ಯಾಖ್ಯಾನ ಮಾಡುತ್ತಲೇ ಇದ್ದಾರೆ. ಆದರೆ ಮುಖ್ಯವಾಹಿನಿಯ ರಾಜಕೀಯದಿಂದ ಬಹುದೂರ ಸರಿದು ಪಕ್ಷದೊಡನೆ ಸಂಬಂಧ ಕಳೆದುಕೊಂಡಿದ್ದಾರೆ. ಒಮ್ಮೆ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ಸದಾನಂದಗೌಡ ಈಗಲೂ ತಾವು ಸ್ಪರ್ಧೆಯಲ್ಲಿರುವಂತೆಯೇ ಮಾತನಾಡುತ್ತಾರೆ. ಆದರೆ ಅವರ ರಾಜಕೀಯ ಬುನಾದಿ ಕುಸಿದುಹೋಗಿದೆ, ಸಕ್ರಿಯ ಪಕ್ಷ ರಾಜಕಾರಣದಲ್ಲಿ ಅವರ ಉಪಯುಕ್ತತೆ ಕನಿಷ್ಠ ಮಟ್ಟ ತಲುಪಿದೆ.

ಇವರನ್ನೂ ಮೀರಿದವರು 95 ದಾಟಿರುವ ಶಾಮನೂರು ಶಿವಶಂಕರಪ್ಪ. ಅವರ ಮಗ ಮತ್ತು ಮಗಳು ಈಗಾಗಲೇ ಸಚಿವರು ಮತ್ತು ಸಂಸದರೂ ಆಗಿದ್ದಾರೆ. ಆದರೂ ಅವರು ತಮ್ಮ ಉಜ್ವಲ ದಿನಗಳು ಉಳಿದಿವೆ ಎಂದೇ ಭಾವಿಸುತ್ತಾರೆ.

ನಿರ್ಗಮಿಸಲು ಏಕೆ ನಿರಾಕರಣೆ?

ಈ ಮನೋವೃತ್ತಿಗೆ ಕಾರಣ ಭಾರತದ ಸಂಸ್ಕøತಿ. ಇಲ್ಲಿ ವೃದ್ಧಾಪ್ಯವನ್ನು ಅಧಿಕಾರ ಮತ್ತು ವಿವೇಕದೊಂದಿಗೆ ಸಮೀಕರಿಸಲಾಗುತ್ತದೆ. ಆದರೆ ಪ್ರಜಾಪ್ರಭುತ್ವ ಉಳಿಯುವುದು, ಪ್ರಸ್ತುತತೆ ಮತ್ತು ಪ್ರಾತಿನಿಧ್ಯವನ್ನು ಆಧರಿಸಿಯೇ ಹೊರತು ಕೇವಲ ದೀರ್ಘ ಕಾಲದ ಬಾಳಿಕೆಯಿಂದಲ್ಲ. ರಾಜಕಾರಣಿಗಳು 80 ವರ್ಷ ದಾಟಿದ ಮೇಲೆ ಹೊಸ ನಾಯಕತ್ವ ಅಥವಾ ಚಿಂತನೆಗಳಿಲ್ಲದೆಯೇ ಸಾರ್ವಜನಿಕರ ನಡುವೆ ಸ್ಥಾನಮಾನ ಬಯಸುವುದರಿಂದ, ಕೇವಲ ಅಬ್ಬರ ಹೆಚ್ಚಾಗುವುದೇ ಹೊರತು, ದೂರದೃಷ್ಟಿ ಇರುವುದಿಲ್ಲ.

ಈ ಲೋಪದೋಷ ರಾಜಕಾರಣಿಗಳಲ್ಲೇ ಇದೆ. ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ವಿಶ್ರಾಂತ ಜೀವನ ಸಾಗಿಸಬೇಕಾದ ವಯೋವೃದ್ಧ ರಾಜಕಾರಣಿಗಳ ಹಪಾಹಪಿತನದಿಂದ ಬಲಿಯಾಗುವುದು ಕ್ರಿಯಾಶೀಲ ಯುವಶಕ್ತಿ. ಸಾರ್ವಜನಿಕ ಜೀವನದಲ್ಲಿ ಶಕ್ತಿ, ಸಾಮಥ್ರ್ಯ, ಹೊಂದಾಣಿಕೆಯ ಮನೋಭಾವ ಮತ್ತು ಪ್ರಸ್ತುತತೆ ಮುಖ್ಯವಾಗುತ್ತದೆ. ಈ ಮುತ್ಸದ್ದಿಗಳು ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಅವರ ಸೇವೆಯು ಗೌರವಾರ್ಹವಾದದ್ದು ಆದರೆ ಪ್ರಜಾತಂತ್ರದ ಪ್ರಕ್ರಿಯೆಯೂ ಗೌರವಯುತವಾದದ್ದು. ಅದು ಮುನ್ನಡೆಯಬೇಕು.

ಈ ನಾಯಕರು ಈ ವೇಳೆಗೆ ತಮ್ಮ ನೆನಪಿನ ಹಾದಿಯನ್ನು ದಾಖಲಿಸುವ ಮೂಲಕ ಯುವ ಸಮೂಹಕ್ಕೆ ಸ್ಪೂರ್ತಿಯುತರಾಗಿ ಬದುಕು ನಡೆಸಬೇಕು. ಅಥವಾ ಚಾರಿತ್ರಿಕ ದೃಷ್ಟಿಕೋನವನ್ನು ನೀಡುವ ಮೂಲಕ ಮುನ್ನಡೆಯಬೇಕು. ಕೇವಲ ಸುದ್ದಿಗೆ ಗ್ರಾಸವಾಗುವುದು ತರವಲ್ಲ. ಈ ಪರಿವರ್ತನೆಯನ್ನು ಸಾಕಾರಗೊಳಿಸುವವರೆಗೂ ನಾವು ಹಿರಿಯ ನಾಯಕರ ಅಬ್ಬರದ ದನಿಯು ನಿರ್ವಾತದಲ್ಲಿ ಪ್ರತಿಧ್ವನಿಸುವುದನ್ನು ನೋಡುತ್ತಲೇ, ಯಾರಾದರೂ ಕೇಳುತ್ತಾರೆ ಎಂಬ ಭ್ರಮೆಯಲ್ಲೇ ಇರಬೇಕಾಗುತ್ತದೆ. ದುರಂತ ಎಂದರೆ ಯಾರಿಗೂ ಇದನ್ನು ಸರಿಪಡಿಸುವ ಇಚ್ಛೆ ಇಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again