ಕರ್ನಾಟಕವಿಂದು ಬುಡಬುಡಿಕೆದಾಸರ ಸಂತೆಯಾಗಿದೆಯೇ?

ಒಣ ಮಾತುಗಳು ಸೋಂಕು ರೋಗದ ಹಾಗೆ ವ್ಯಾಪಿಸುತ್ತದೆ.


ಕರ್ನಾಟಕದ ರಾಜಕೀಯ ವಲಯದಲ್ಲಿ ಒಂದು ಹೊಸ ವ್ಯಾಧಿ ಆಳವಾಗಿ ಬೇರೂರುತ್ತಿದೆ. ಇದನ್ನು ಅನಗತ್ಯವಾದ ಮಾತಿನ ವ್ಯಸನ ಎಂದೂ ಕರೆಯಬಹುದು. ಈ ವಾತಾವರಣದಲ್ಲಿ ರಾಜಕಾರಣಿಗಳು, ಪಕ್ಷಾತೀತವಾಗಿ ತಮ್ಮ ಸ್ಥಾನಮಾನಗಳನ್ನೂ ಲೆಕ್ಕಿಸದೆ, ಪ್ರಸ್ತುತತೆಯನ್ನೂ ಪರಿಗಣಿಸದೆ ಬಡಬಡಿಸುವ  ಅಭ್ಯಾಸ ಮಾಡಿಕೊಂಡಿದ್ದಾರೆ. ಯಾವುದೇ ಸಮಯದಲ್ಲಾದರೂ ಯಾವುದೋ ವಿಷಯದ ಬಗ್ಗೆ ಮಾತನಾಡುವ ಈ ನಾಯಕರ ಮಾತುಗಳಿಂದ ಯಾವ ಪರಿಣಾಮಗಳೂ ಉಂಟಾಗುವುದಿಲ್ಲ.

ಮುಖ್ಯವಾದ ವಿಷಯಗಳನ್ನು ಕುರಿತ ಪತ್ರಿಕಾ ಹೇಳಿಕೆಯಾಗಿ ಆರಂಭವಾಗುವ ಈ ಮಾತುಗಳು ಅಂತ್ಯವಿಲ್ಲದ ವಿರೋಧಿ ಹೇಳಿಕೆಗಳಾಗಿ ಅಥವಾ ರಾಜಕೀಯ ನಾಯಕರ ವ್ಯಾಪ್ತಿಯನ್ನೂ ಮೀರಿ, ಅವರ ಅರ್ಹತೆಯನ್ನೂ ಮೀರಿ ವಿಸ್ತರಿಸುತ್ತದೆ. ಸಾರ್ವಜನಿಕ ಮೂಲ ಸೌಕರ್ಯಗಳನ್ನು ಕುರಿತು ಮಾತನಾಡಬೇಕಾದ ಒಬ್ಬ ನಾಯಕ ಭೌಗೋಳಿಕ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಎಂದೂ ಕಾಣಿಸಿಕೊಳ್ಳದ, ದನಿ ಎತ್ತದ ಪುಢಾರಿಗಳು ಹಠಾತ್ತನೆ ಸದನದ ಹೊರಗೆ ರಾಷ್ಟ್ರೀಯ ನೈತಿಕತೆಯ ವಕ್ತಾರರಾಗಿ ಮಾತನಾಡತೊಡಗುತ್ತಾರೆ. ಅನೇಕ ಪ್ರಸಂಗಗಳಲ್ಲಿ ಈ ಹೇಳಿಕೆಗಳಲ್ಲಿ ಹುರುಳಿರುವುದಿಲ್ಲ, ಸ್ಪಷ್ಟತೆ ಅಥವಾ ಪರಿಹಾರಗಳೂ ಇರುವುದಿಲ್ಲ. ಉತ್ತರದಾಯಿತ್ವವಂತೂ ಸುತಾರಾಂ ಇರುವುದಿಲ್ಲ. ಕೇವಲ ಪ್ರಚಾರದಲ್ಲಿರಲು ಈ ಹೇಳಿಕೆಗಳು ನೆರವಾಗುತ್ತವೆ.

ಇದು ಕೇವಲ ಆಕ್ಷೇಪವಲ್ಲ. ರಾಜಕೀಯ ಸಂಸ್ಕøತಿಯಲ್ಲಿರುವ ಒಂದು ರಚನಾತ್ಮಕ ಸಮಸ್ಯೆ. ಇಂದು ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ತಮ್ಮ ಪ್ರಸ್ತುತತೆಯ ಸಾಕ್ಷಿ ಎಂದು ಭಾವಿಸುತ್ತಾರೆ. ಮಾಧ್ಯಮ ಲೋಕದಲ್ಲಿ ಹೇಳಿಕೆಗಳನ್ನು ಕೊಡಲು ಕಾತರದಿಂದಿರುತ್ತಾರೆ. ಅತಿ ಹೆಚ್ಚು ಅಬ್ಬರದ ಮಾತುಗಳು ಹೆಚ್ಚು ಪ್ರಚಾರ ಪಡೆಯುತ್ತವೆ. ತತ್ಪರಿಣಾಮವಾಗಿ ಅರ್ಥಪೂರ್ಣ ಚರ್ಚೆಯಾಗುವುದರ ಬದಲು ಕೇವಲ ಆಡಂಬರದ ಮಾತುಗಳು ಮೇಳೈಸುತ್ತವೆ. ವಿವಾದಾಸ್ಪದ ಹೇಳಿಕೆಗಳು ಪತ್ರಿಕೆಗಳ, ಟಿವಿ ವಾಹಿನಿಗಳ ಮುಖ್ಯ ಸುದ್ದಿಯಾಗುತ್ತವೆ. ಆದರೆ ಇದರಿಂದ ಮತದಾರರಿಗೆ ಏನೂ ಉಪಯೋಗವಾಗುವುದಿಲ್ಲ.

ವಿಪರ್ಯಾಸ ಎಂದರೆ ಈ ಒಣಮಾತಿನ ಸಂಸ್ಕøತಿ ನೈಜ ಸಂವಹನವಾಗಿ ಕಾಣುವುದಿಲ್ಲ. ಸರ್ಕಾರವು ತನ್ನ ಬಜೆಟ್ ಆದ್ಯತೆಗಳನ್ನು ಜನರ ಮುಂದಿಡಲು ವಿಫಲವಾದಾಗ, ವಿರೋಧ ಪಕ್ಷದ ನಾಯಕರು ಪರ್ಯಾಯ ನೀತಿಗಳನ್ನು ಸ್ಪಷ್ಟವಾಗಿ ಮಂಡಿಸಲು ವಿಫಲರಾದಾಗ ಈ ನಿರಂತರ ಹೇಳಿಕೆಗಳು ಪೆÇಳ್ಳಾಗಿ ಕಾಣುತ್ತವೆ. ಸಾರ್ವಜನಿಕರು ಈ ಸ್ಪಷ್ಟತೆ ಇಲ್ಲದ ಅಬ್ಬರದಿಂದ ಬೇಸತ್ತುಹೋಗುತ್ತಾರೆ. ಬಹುಮುಖ್ಯ ವಿಷಯಗಳಾದ ಆರೋಗ್ಯ, ಶಿಕ್ಷಣ, ಉದ್ಯೋಗ, ಪರಿಸರ ಮತ್ತು ವಾತಾವರಣದ ರಕ್ಷಣೆ ಇದಾವುದೂ ಈ ಮಾತುಗಳಲ್ಲಿ ಕಾಣುವುದಿಲ್ಲ.

ಪಕ್ಷಗಳ ಹೈಕಮಾಂಡ್‍ಗಳೂ ಸಹ ಇಲ್ಲಿ ಬಲಹೀನವಾಗಿರುತ್ತವೆ ಅಥವಾ ಹಸ್ತಕ್ಷೇಪ ಮಾಡಲು ಇಚ್ಚಿಸುವುದಿಲ್ಲ. ಶಿಸ್ತು ಹೇರಲು ಮುಂದಾಗುವುದಿಲ್ಲ. ಮತ್ತೆ ಮತ್ತೆ ನಾಯಕರು ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಹೇಳಿಕೆಗಳನ್ನು ನೀಡುತ್ತಿರುವಾಗ, ಅಥವಾ ಸಹ ನಾಯಕರನ್ನು ಲೇವಡಿ ಮಾಡುತ್ತಿರುವಾಗ, ಹೈಕಮಾಂಡ್‍ಗಳು ಒಮ್ಮೊಮ್ಮೆ ಎಚ್ಚರಿಕೆ ನೀಡುತ್ತವೆ, ಆದರೆ ಎಲ್ಲೂ ಸಹ ಖಂಡಿಸುವುದಿಲ್ಲ. ಯಾವುದೇ ಕ್ರಿಯಾಶೀಲ ಸಂಘಟನೆಯಲ್ಲಿ ಈ ಅವಿಧೇಯತೆ ನಾಯಕತ್ವದಿಂದ ಗಂಭೀರ ಪ್ರತಿಕ್ರಿಯೆಗೆ ಒಳಗಾಗಬೇಕು. ಆದರೆ ನಮ್ಮ ರಾಜಕೀಯ ಪಕ್ಷಗಳಲ್ಲಿ ಇದನ್ನು ನಿರ್ಲಕ್ಷಿಸಲಾಗುತ್ತದೆ, ಇನ್ನೂ ದುರಂತ ಎಂದರೆ ಅದು ಸಾರ್ವಜನಿಕರ ಗಮನ ಸೆಳೆಯುವುದಾದರೆ ಮೌನ ವಹಿಸಲಾಗುತ್ತದೆ.

ಇಲ್ಲಿ ಅತಿ ಹೆಚ್ಚು ಹಾನಿಗೊಳಗಾಗುವುದು ಆಳ್ವಿಕೆ. ರಾಜಕಾರಣಿಗಳು ಮಾಧ್ಯಮ ಪಂಡಿತರ ಹಾಗೆ ವರ್ತಿಸಲಾರಂಭಿಸಿದಾಗ, ತಮ್ಮ ಕರ್ತವ್ಯವನ್ನು ಮರೆತುಬಿಡುತ್ತಾರೆ. ಕ್ಷೇತ್ರದ ಅಗತ್ಯತೆಗಳನ್ನು ನಿರ್ಲಕ್ಷಿಸುತ್ತಾರೆ, ಕಾಯ್ದೆಗಳಿಗೆ, ಶಾಸನಗಳಿಗೆ ಧಕ್ಕೆ ಉಂಟಾಗುತ್ತದೆ, ಆಡಳಿತದ ಬಗ್ಗೆ ಗಮನ ಇಲ್ಲವಾಗುತ್ತದೆ. ಕರ್ನಾಟಕದ ಜನತೆ ಇಂತಹ ವಾತಾವರಣದಲ್ಲೇ ಒಣಮಾತುಗಳಿಗೆ ಒಗ್ಗಿಹೋಗಿದ್ದಾರೆ. ಅನುಕಂಪದ ಬದಲು ಅಹಂಕಾರವೇ ಮೇಳೈಸುತ್ತದೆ.

ವಾಕ್ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮೂಲ ತತ್ವ. ಆದರೆ ಈ ಸ್ವಾತಂತ್ರ್ಯ ಸಮತೋಲನದಿಂದ, ಜವಾಬ್ದಾರಿಯಿಂದ ಬಳಸಲ್ಪಡಬೇಕು. ಅದರಲ್ಲೂ ಸಾರ್ವಜನಿಕ ವ್ಯಕ್ತಿಗಳು ತಮ್ಮ ಮಾತುಗಳಿಂದ ಪ್ರಕ್ಷುಬ್ಧತೆ, ಗೊಂದಲ ಉಂಟಾಗುತ್ತದೆ,  ಸಮಾಜದ ವಿಭಜನೆಗೆ ಕಾರಣವಾಗುತ್ತದೆ, ಲಕ್ಷಾಂತರ ಜನರ ದಾರಿ ತಪ್ಪಿಸುತ್ತದೆ ಎನ್ನುವುದನ್ನು ಅರಿತಿರಬೇಕು. ಕರ್ನಾಟಕಕ್ಕೆ ಇಂತಹ ಕೇವಲ ಶುಷ್ಕ ಮಾತುಗಳಾಡುವ ನಾಯಕರ ಅಗತ್ಯವಿಲ್ಲ. ಬದಲಾಗಿ ನಾಯಕರಿಂದ ಉತ್ತಮ ಮಾತುಗಳನ್ನು ಅಪೇಕ್ಷಿಸಲಾಗುತ್ತದೆ. ಎಚ್ಚರಿಕೆಯಿಂದ, ಮಾಹಿತಿ ಪೂರ್ಣವಾಗಿ, ಉದ್ದೇಶ ಇರುವ ಮಾತುಗಾರಿಕೆಯನ್ನು ಬಯಸುತ್ತದೆ.

ಇದು ಸಾಧ್ಯವಾಗದೆ ಹೋದರೆ ಇದೇ ಒಣ ಮಾತುಗಳು ಒಂದು ಸೋಂಕು ರೋಗದ ಹಾಗೆ ವ್ಯಾಪಿಸುತ್ತದೆ. ಕೇವಲ ಸತ್ವ ಇಲ್ಲದ ಪೆÇಳ್ಳು ಮಾತುಗಳು ಸದ್ದುಮಾಡುತ್ತಿರುತ್ತವೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again