ವೈಚಾರಿಕತೆಯಿಂದ ಆರಾಧನೆಯವರೆಗೆ - ಸಿದ್ದರಾಮಯ್ಯನವರ ದ್ವಂದ್ವಗಳು
ಕರ್ನಾಟಕ ಒಂದು ಕಾಲದಲ್ಲಿ ಮೂಢನಂಬಿಕೆಗಳ ವಿರುದ್ಧ ಕಾನೂನು ಜಾರಿಗೊಳಿಸುವ ಮಾದರಿಯನ್ನು ದೇಶಕ್ಕೆ ಒದಗಿಸಿತ್ತು. ಹಾಗಾಗಿ ಈ ರಾಜ್ಯದ ಮುಖ್ಯಮಂತ್ರಿಯಾದವರು ಈ ಪರಂಪರೆಯನ್ನು ಅಲ್ಲಗಳೆದು ಅಲಕ್ಷಿಸಬಾರದು.
2017ರಲ್ಲಿ ಕರ್ನಾಟಕ ಸರ್ಕಾರ ಮೂಢ ನಂಬಿಕೆ ವಿರೋಧಿ ಕಾನೂನು ಜಾರಿಗೊಳಿಸುವ ಮೂಲಕ ದೇಶದಲ್ಲೇ ಈ ಕ್ರಮ ಕೈಗೊಂಡ ಮೊದಲ ರಾಜ್ಯವಾಗಿ ಕಂಡಿತ್ತು. ಈ ಪ್ರಗತಿಪರ ದಿಟ್ಟ ಹೆಜ್ಜೆಯ ಮುಖಾಂತರ ಅಮಾನುಷವಾದ, ಶೋಷಣೆಯಿಂದ ಕೂಡಿದ ನಂಬಿಕೆಗಳನ್ನಾಧರಿಸಿದ ಆಚರಣೆಗಳನ್ನು ನಿಷೇಧಿಸುವುದು ಮಸೂದೆಯ ಉದ್ದೇಶವಾಗಿತ್ತು. ತಮ್ಮನ್ನು ನಾಸ್ತಿಕ, ವಿಚಾರವಾದಿ ಎಂದು ಕರೆದುಕೊಳ್ಳುವ ಅಂದಿನ ಮತ್ತು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತು. ಆ ಸಮಯದಲ್ಲಿ ನಾಗರಿಕ ಸಮಾಜವೂ ಈ ಮಸೂದೆಯನ್ನು ಪ್ರಶಂಸಿಸಿತ್ತು. ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿರುವವರು, ವೈಜ್ಞಾನಿಕ ಮನೋಭಾವ ಬಯಸುವವರಿಗೆ ಇದು ಇಡೀ ದೇಶಕ್ಕೆ ಮಾದರಿಯಾಗಬಹುದಾದ ಮಸೂದೆಯಾಗಿ ಕಂಡಿತ್ತು.
ಇಂದು ಈ ಪರಂಪರೆ ಛಿದ್ರವಾಗಿದೆ. ಈ ಕಾನೂನು ವಿಫಲವಾಗಿರುವುದರಿಂದ ಅಲ್ಲ, ಅದರ ಮೂಲ ಕರ್ತೃ ಈಗ ಕಾನೂನಿನ ಹಿಂದಿದ್ದ ಸ್ಫೂರ್ತಿಯನ್ನು ಸ್ವತಃ ಕೈಬಿಟ್ಟಿರುವ ಕಾರಣದಿಂದ. ಈಗ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಈಗ ಸತತವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಹಳೆಯ ಮೈಸೂರು ಪ್ರಾಂತ್ಯದ ನದಿಗಳಿಗೆ ಬಾಗಿನ ಅರ್ಪಿಸುತ್ತಾರೆ, ಇತ್ತೀಚಿನ ನಿರ್ಧಾರವೊಂದರಲ್ಲಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಆಚರಿಸುವ ಸಲುವಾಗಿ ಸರ್ಕಾರದ ವತಿಯಿಂದ 100 ಕೋಟಿ ರೂ ಹಣವನ್ನು ಒದಗಿಸುತ್ತಾರೆ. ಇದಾವುದೂ ಭಕ್ತಿ ಭಾವದ ಚಟುವಟಿಕೆಗಳಲ್ಲ. ಟೆಲಿವಿಷನ್‍ಗಳ ಮೂಲಕ ಬಿತ್ತರಿಸಲಾಗುವ ಪ್ರಸಂಗಗಳು. ಸರ್ಕಾರದ ಬೆಂಬಲದೊಂದಿಗೆ ಏರ್ಪಡಿಸಲಾಗುವ ಸಾಂಸ್ಕøತಿಕ ಆಚರಣೆಗಳು. ಇಲ್ಲಿ ಸಂದೇಶವು ಸ್ಪಷ್ಟವಾಗಿದೆ: ಸರ್ಕಾರವು ಆಚರಣೆಗಳೊಂದಿಗೆ ಯಾವುದೇ ತಕರಾರು ಹೊಂದಿಲ್ಲದೆ, ಅಂತಹ ಆಚರಣೆಗಳಿಗೆ ಹಣ ಒದಗಿಸಿ ಪೆÇ್ರೀತ್ಸಾಹಿಸಲು ಸಿದ್ಧವಾಗಿದೆ.
ವೈಯುಕ್ತಿಕ ನಂಬಿಕೆಗಳನ್ನು ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಯನ್ನೂ ಸೇರಿದಂತೆ ಪ್ರತಿಯೊಬ್ಬ ನಾಗರಿಕನೂ ತನ್ನದೇ ಆದ ಧಾರ್ಮಿಕ ಆಚರಣೆಯನ್ನು ಪಾಲಿಸುವ ಹಕ್ಕು ಹೊಂದಿರುತ್ತಾರೆ. ಆದರೆ ಸಿದ್ದರಾಮಯ್ಯ ಅವರ ಪ್ರಸಂಗದಲ್ಲಿ ಕೇವಲ ನಂಬಿಕೆ ಒಂದೇ ಪ್ರಶ್ನೆಯಲ್ಲ, ಇದು ರಾಜಕೀಯ ಅನಿಶ್ಷಿತತೆ ಮತ್ತು ಇಬ್ಬಂದಿತನದ ಸಂಕೇತವಾಗಿ ಕಾಣುತ್ತದೆ. ಒಂದೆಡೆ ವೈಜ್ಞಾನಿಕ ಮನೋಭಾವವನ್ನು ಪೆÇ್ರೀತ್ಸಾಹಿಸಿ ನಾಸ್ತಿಕನೆಂದು ಘೋಷಿಸುತ್ತಲೇ ಮತ್ತೊಂದೆಡೆ ವೈಭವೋಪೇತ ಧಾರ್ಮಿಕ ಚಟುವಟಿಕೆಗಳನ್ನು, ತೆರಿಗೆದಾರರ ಹಣ ಬಳಸಿ ಆಚರಿಸುವುದು ಸಮರ್ಥನೀಯವಲ್ಲ. ಈ ವೈರುಧ್ಯವು ಕೇವಲ ಮುಜುಗರ ಉಂಟುಮಾಡುವುದಷ್ಟೇ ಅಲ್ಲದೆ, ಅಪಾಯಕಾರಿಯಾಗಿಯೂ ಕಾಣುತ್ತದೆ. ಏಕೆಂದರೆ ಇದು ಸಾರ್ವಜನಿಕರನ್ನು ಗೊಂದಲಕ್ಕೆ ಸಿಲುಕಿಸುತ್ತದೆ, ಕಾನೂನುಗಳನ್ನು ಸಡಿಲಗೊಳಿಸುತ್ತದೆ ಮತ್ತು ವೈಚಾರಿಕ ಸಂವಾದವನ್ನು ನಿರ್ಲಕ್ಷಿಸುತ್ತದೆ.
ವೈಜ್ಞಾನಿಕ ಮನೋಭಾವವು ವೈಯುಕ್ತಿಕ ಗುಣ ಅಥವಾ ತತ್ವಶಾಸ್ತ್ರೀಯ ಆಯ್ಕೆ ಅಲ್ಲ. ಇದು ಸಂವಿಧಾನ ಅನುಚ್ಛೇದ 51 ಎ(ಎಚ್) ಅಡಿಯಲ್ಲಿ ಸಾಂವಿಧಾನಿಕ ಕರ್ತವ್ಯವೂ ಆಗಿರುತ್ತದೆ. ಸಾಕ್ಷ್ಯಾಧಾರಿತ ಆಲೋಚನೆಗಳು, ವಿಮರ್ಶಾತ್ಮಕ ಪರಿಶೋಧನೆ ಮತ್ತು ಅತಾರ್ಕಿಕತೆಯ ನಿರಾಕರಣೆಯನ್ನು ಈ ನಿಯಮವು ಬಯಸುತ್ತದೆ. ಸಾರ್ವಜನಿಕ ಜೀವನದಲ್ಲಿ ಇದನ್ನು ಅಪೇಕ್ಷಿಸುತ್ತದೆ. ಒಮ್ಮೆ ಸರ್ಕಾರವೇ ಇದನ್ನು ಉಲ್ಲಂಘಿಸಿ ಒಂದು ಕಾಲದಲ್ಲಿ ಖಂಡಿಸಲಾದ ಆಚರಣೆಗಳನ್ನು ಮರಳಿ ಪೆÇ್ರೀತ್ಸಾಹಿಸಿದರೆ, ಅದು ಮೂಢ ನಂಬಿಕೆ ವಿರೋಧಿಸುವ ಕಾನೂನು ಜಾರಿಗೊಳಿಸುವ ನೈತಿಕ ಅಧಿಕಾರವನ್ನೇ ಕಳೆದುಕೊಳ್ಳುತ್ತದೆ.
ರಾಜಕೀಯ ವರ್ಗವು ಪಕ್ಷಾತೀತವಾಗಿ ಜನರ ಶ್ರದ್ಧಾನಂಬಿಕೆಗಳನ್ನು ಜನಪ್ರಿಯತೆಗಾಗಿ ರಾಜಿ ಮಾಡಿಕೊಳ್ಳುವ ಪಾಪಪ್ರಜ್ಞೆಯಿಂದ ಬಳಲುತ್ತಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಅವರದೇ ಆದ ಪ್ರತ್ಯೇಕ ಅಸ್ಮಿತೆ ಇದೆ. ಆಧುನಿಕತಾವಾದಿ, ಅಂಧ ಶ್ರದ್ಧೆಯನ್ನು ಎದುರಿಸಿ ನಿಲ್ಲುವ ದಿಟ್ಟ ನಾಯಕ ಎಂದು ಹೆಸರಿದೆ. ಆದರೆ ಅವರ ಕ್ರಿಯೆಯು ಟೀಕಾಕಾರರಿಗೆ ಅಸ್ತ್ರ ಒದಗಿಸುವುದೇ ಅಲ್ಲದೆ, ರಾಜ್ಯದ ವೈಚಾರಿಕ ಆಂದೋಲನವನ್ನು ಗೊಂದಲಕ್ಕೆ ದೂಡಿ ದಿಕ್ಕಿಲ್ಲದಂತೆ ಮಾಡುತ್ತದೆ.
ಸಾರ್ವಜನಿಕ ನಾಯಕರ ಕರ್ತವ್ಯ ಕೇವಲ ಕಾನೂನು ರೂಪಿಸುವುದಷ್ಟೇ ಅಲ್ಲ, ಅದರ ಉದ್ದೇಶಗಳನ್ನು ಅವರ ಮೂಲಕ ಅಳವಡಿಸಿಕೊಳ್ಳುವುದು. ನಾಯಕರೊಬ್ಬರು ನುಡಿದಂತೆ ನಡೆಯಲು ವಿಫಲವಾದರೆ, ಅದರಲ್ಲೂ ತರ್ಕ ಮತ್ತು ನಂಬಿಕೆಗಳ ವಿಚಾರದಲ್ಲಿ, ಸಾರ್ವಜನಿಕರ ವಿಶ್ವಾಸಕ್ಕೆ ಸರಿಪಡಿಸಲಾಗದ ಧಕ್ಕೆ ಉಂಟಾಗುತ್ತದೆ.
ವೈಚಾರಿಕತೆಯು ಕೇವಲ ಘೋಷಣೆಗಳಿಗೆ ಸೀಮಿತವಾಗದೆ ಉಳಿಯುವಂತಾದರೆ, ಅದನ್ನು ಪ್ರತಿಪಾದಿಸುವ ವಕ್ತಾರರು ತಮ್ಮದೇ ನಿದರ್ಶನದ ಮೂಲಕ ಮುಂದುವರೆಯಬೇಕು. ಸಾರ್ವಜನಿಕರಿಗೆ ಸ್ಪಷ್ಟತೆ ಬೇಕಿದೆಯೇ ಹೊರತು ವೈರುಧ್ಯಗಳಲ್ಲ. ಕರ್ನಾಟಕ ಒಂದು ಕಾಲದಲ್ಲಿ ಮೂಢನಂಬಿಕೆಗಳ ವಿರುದ್ಧ ಕಾನೂನು ಜಾರಿಗೊಳಿಸುವ ಮಾದರಿಯನ್ನು ದೇಶಕ್ಕೆ ಒದಗಿಸಿತ್ತು, ಹಾಗಾಗಿ ಈ ರಾಜ್ಯದ ಮುಖ್ಯಮಂತ್ರಿಯಾದವರು ಈ ಪರಂಪರೆಯನ್ನು ಅಲ್ಲಗಳೆದು ಅಲಕ್ಷಿಸಬಾರದು.
Comments
Post a Comment