ಘೋಷಣೆ ಮೊದಲು, ನಂತರ ಯೋಜನೆ

ಕರ್ನಾಟಕದ ಆಡಳಿತ ಮಾದರಿ


ಯಾವುದೇ ಜವಾಬ್ದಾರಿಯುತ ಪ್ರಜಾಪ್ರಭುತ್ವದಲ್ಲಿ ಆಳ್ವಿಕೆ ಎನ್ನುವುದು ರಚನಾತ್ಮಕವಾಗಿ ನಡೆಯುವ ಪ್ರಕ್ರಿಯೆ. ಗ್ರಾಮೀಣ ರಸ್ತೆಗಳಿಂದ ಬೃಹತ್ ಮೂಲಸೌಕರ್ಯಗಳವರೆಗೆ ಪ್ರತಿಯೊಂದು ಯೋಜನೆಯೂ ಸಹ ಸಾಂಸ್ಥಿಕ ಪ್ರಕ್ರಿಯೆಗಳನ್ನು ಹಾದು ಹೋಗಬೇಕಾಗುತ್ತದೆ. ಯೋಜನೆಯ ಔಚಿತ್ಯ, ದೀರ್ಘ ಕಾಲಿಕ ಬಾಳಿಕೆ, ಆಡಳಿತ ವಿಭಾಗಗಳ ನಿರ್ವಹಣೆ, ಯೋಜನಾ ಮಂಡಲಿಯ ಪರಿಶೀಲನೆ ಮತ್ತು ಬಹುಮುಖ್ಯವಾಗಿ ಶಾಸಕಾಂಗದ ವತಿಯಿಂದ ಬಜೆಟ್ ಮಂಜೂರಾತಿ ಇಲ್ಲಿ ಮುಖ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ಹಣವನ್ನು ಪೆÇೀಲು ಮಾಡದೆ, ವಿವೇಕಯುತವಾಗಿ, ಪಾರದರ್ಶಕವಾಗಿ, ನಿರಂತರತೆಯ ಪ್ರಜ್ಞೆಯೊಡನೆ ಬಳಸಲು ಸಾಧ್ಯವಾಗುತ್ತದೆ. ಆದರೆ ಕರ್ನಾಟಕ ಈ ನಿಯಮಾವಳಿಯನ್ನು ಬದಲಿಸಿರುವಂತೆ ಕಾಣುತ್ತಿದೆ.

ಕಳೆದ ಹಲವು ತಿಂಗಳುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉನ್ನತ ವೆಚ್ಚದ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಹೊಸ ಸಾರಿಗೆ ಕಾರಿಡಾರ್‍ಗಳು, ವಿಸ್ತಾರವಾದ ವಸತಿ ಬಡಾವಣೆಗಳ ಯೋಜನೆಗಳನ್ನು ಸಾರ್ವಜನಿಕ ಸಭೆಗಳಲ್ಲಿ, ಸಮಾವೇಶಗಳಲ್ಲಿ, ಜಿಲ್ಲಾ ಪರಿಶೋಧನೆಯ ಪ್ರಕ್ರಿಯೆಯಲ್ಲಿ ಘೋಷಿಸಿದ್ದಾರೆ. ಇವೆಲ್ಲವೂ ಸಣ್ಣ ಪ್ರಮಾಣದ ನೀತಿಗಳಲ್ಲ; ಬದಲಾಗಿ ಸಾವಿರಾರು ಕೋಟಿ ರೂ.ಗಳ ಬಂಡವಾಳ ಅಗತ್ಯವಿರುವ ಯೋಜನೆಗಳು. ಆದಾಗ್ಯೂ ಇದಕ್ಕೆ ಪೂರಕವಾದ ದಾಖಲೆ ಅಥವಾ ಸಚಿವ ಸಂಪುಟದ ಟಿಪ್ಪಣಿಗಳಾಗಲೀ, ಶಾಸಕಾಂಗದ ಚರ್ಚೆಯಾಗಲೀ ಕಾಣುವುದಿಲ್ಲ. ಇದು ಒಂದು ರೀತಿಯಲ್ಲಿ ಏಕ ವ್ಯಕ್ತಿಯ ಆಳ್ವಿಕೆಯ ಮಾದರಿಯನ್ನು ಅನುಸರಿಸುವ ಮಾರ್ಗವಾಗಿದೆ. ಇಲ್ಲಿ ರಾಜಕೀಯ ಒತ್ತಾಸೆಗಳೆ ಪ್ರಧಾನವಾಗಿ, ಸಾಂಸ್ಥಿಕ ಪ್ರಕ್ರಿಯೆಗಳು ಹಿನ್ನಲೆಗೆ ಸರಿಯುತ್ತವೆ.

ಈ ಪ್ರಕ್ರಿಯೆಯು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಯೋಜನೆಗಳಿಗೆ ಹಣಕಾಸು ಎಲ್ಲಿಂದ ಬರುತ್ತದೆ? ರಾಜ್ಯದ ಬೊಕ್ಕಸವು ಈಗಾಗಲೇ ಒತ್ತಡದಲ್ಲಿರುವುರಿಂದ, ಈ ಪ್ರಶ್ನೆ ಮುಖ್ಯವಾಗುತ್ತದೆ. ಹೆಚ್ಚು ಜನಪ್ರಿಯವಾಗಿರುವ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಉಚಿತ ಪ್ರಯಾಣ, ಉಚಿತ ಪಡಿತರ, ನಗದು ವರ್ಗಾವಣೆ ಇತ್ಯಾದಿಗಳ ಪರಿಣಾಮ ವರ್ಷಕ್ಕೆ 75 ಸಾವಿರ ಕೋಟಿ ರೂ.ಗಳ ಹೊರೆ ಬೊಕ್ಕಸದ ಮೇಲೆ ಬೀಳುತ್ತದೆ. ಎಂದಿನ ಕಾರ್ಯಕ್ರಮಗಳಾದ ಲೋಕೋಪಯೋಗಿ ಇಲಾಖೆಯ ಕೆಲಸಗಳು, ನೀರಾವರಿ ಮತ್ತು ನಗರಾಭಿವೃದ್ಧಿ ಮುಂತಾದವು ಹಣಕಾಸು ಮುಗ್ಗಟ್ಟಿನಿಂದ ಉಸಿರುಗಟ್ಟಿದಂತಾಗಿದ್ದು, ಈ ಹಿಂದೆ ಮಂಜೂರಾದ ಯೋಜನೆಗಳನ್ನೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸರ್ಕಾರಿ ಕಚೇರಿಗಳ ದೈನಂದಿನ ನಿರ್ವಹಣೆಯೂ ದುಸ್ತರವಾಗಿದ್ದು, ಶಾಲಾ ನಿರ್ವಹಣೆಗೆ ತೀವ್ರ ಧಕ್ಕೆ ಉಂಟಾಗಿದೆ. ಇಂತಹ ಸನ್ನಿವೇಶದಲ್ಲಿ, ಸರ್ಕಾರವು ಮ್ಯಾಜಿಕ್ ಮಾಡುವ ರೀತಿಯಲ್ಲಿ ಹೊಸ ಯೋಜನೆಗಳನ್ನು ಘೋಷಿಸುವುದಾದರೂ ಹೇಗೆ ಸಾಧ್ಯ?

ಇಲ್ಲಿ ಹಣಕಾಸಿಗಿಂತಲೂ ಹೆಚ್ಚಿನ ಸಮಸ್ಯೆಗಳು ಕಾಣುತ್ತವೆ. ಸ್ಥಾಪಿತ ನಿಯಮಗಳನ್ನು ಉಲ್ಲಂಘಿಸುವುದೇ ನಿರ್ಣಾಯಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ. ವಿಶೇಷವಾಗಿ ಹಣಕಾಸು ಮತ್ತು ಯೋಜನಾ ವಿಭಾಗಗಳು ಈಗ ಘೋಷಿತ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಇರುವ ಸಂಸ್ಥೆಗಳಾಗಿರುವುದರಿಂದ ಕ್ರಿಯಾಶೀಲ ಭಾಗಿದಾರ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲಾಗುವುದಿಲ್ಲ. ಅಧಿಕಾರಶಾಹಿಯು ತಮ್ಮ ಮಂಜೂರಾದ ಹಣವನ್ನು ಅದಲುಬದಲು ಮಾಡುತ್ತಾ, ಜಾರಿಯಲ್ಲಿರುವ ಯೋಜನೆಗಳ ನಿಧಿಯನ್ನು ಯಾವುದೇ ಉತ್ತರದಾಯಿತ್ವ ಅಥವಾ ಸ್ಪಷ್ಟತೆ ಇಲ್ಲದೆ ಅನ್ಯ ಯೋಜನೆಗಳಿಗೆ ಬಳಸಲು ಆರಂಭಿಸಿವೆ. ಇದು ವಿಳಂಬಕ್ಕೆ ಕಾರಣವಾಗುವುದಷ್ಟೇ ಅಲ್ಲದೆ, ವೆಚ್ಚಗಳ ಹೆಚ್ಚಳವೂ ಉಂಟಾಗಿ ಸಾರ್ವಜನಿಕರ ಭ್ರಮನಿರಸನಕ್ಕೆ ಕಾರಣವಾಗುತ್ತದೆ.

ಇನ್ನೂ ವಿಷಾದಕರ ಅಂಶವೆಂದರೆ, ಈ ಅರೆಬರೆ ಸಂಸ್ಕøತಿಯು ಜನಪ್ರಿಯತೆಯನ್ನು ಪ್ರಚೋದಿಸುವ ಮೂಲಕ, ಸುದ್ದಿಪತ್ರಿಕೆಗಳ ಮುಖ್ಯಸುದ್ದಿಗೆ ಸೀಮಿತವಾದ ರಾಜಕಾರಣವನ್ನು ಪೆÇೀಷಿಸುತ್ತದೆ. ಇದು ದೃಷ್ಟಿಕೋನವಿಲ್ಲದ ಮಾದರಿ. ಒಂದು ಜಿಲ್ಲೆಗೆ ಸ್ಥಳೀಯ ಹೋರಾಟಗಳ ಫಲವಾಗಿ ವಿಶ್ವವಿದ್ಯಾಲಯ ಮಂಜೂರಾಗುತ್ತದೆ, ಮತ್ತೊಂದು ಹೆದ್ದಾರಿ ನಿರ್ಮಾಣ ಪಡೆಯುತ್ತದೆ - ಏಕೆಂದರೆ ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಸುಸ್ಥಿರವಲ್ಲದ ಮಾದರಿಯ ಪೂರ್ವನಿದರ್ಶನವಾಗಿ ರೂಪುಗೊಂಡು ಹಣಕಾಸು ಶಿಸ್ತನ್ನು ಇಲ್ಲವಾಗಿಸುತ್ತದೆ.

ಕರ್ನಾಟಕಕ್ಕೆ ಬೇಕಿರುವುದು ಸಾಂವಿಧಾನಿಕ ಆಳ್ವಿಕೆ, ಇಲ್ಲಿ ಕಾರ್ಯಗತವಾಗುವ ಮುನ್ನ ಯಾವುದೇ ಕ್ರಮವು ಯೋಜನಾಬದ್ಧವಾಗಿರಬೇಕು, ಘೋಷಣೆಗಳಿಗೆ ಪೂರಕವಾಗಿ ಹಣಕಾಸು ಪೂರೈಕೆ ಇರಬೇಕು, ಚುನಾಯಿತ ಪ್ರತಿನಿಧಿಗಳು ಸಂಸ್ಥೆಗಳ ಸಾಮೂಹಿಕ ವಿವೇಕವನ್ನು ಗೌರವಿಸಬೇಕು. ರಾಜ್ಯದ ಆರ್ಥಿಕ ಸ್ವಾಸ್ಥ್ಯ ಮತ್ತು ಆಡಳಿತದ ವಿಶ್ವಾಸಾರ್ಹತೆಗೆ ಇದು ಬಹಳ ಮುಖ್ಯ.

ಆದರೆ ಈಗ ರಾಜಕೀಯ ಭರವಸೆ ಮತ್ತು ಹಣಕಾಸು ಪೂರೈಕೆಯ ನಡುವೆ ಅಪಾರ ಅಂತರ ಕಾಣುತ್ತಿದೆ. ಇದನ್ನು ಸರಿಪಡಿಸದೆ ಹೋದರೆ, ಇದು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಂಟಕಪ್ರಾಯವಾಗುತ್ತದೆ. ನಿಯಮಾಧಾರಿತ ಆಳ್ವಿಕೆಯ ಚೌಕಟ್ಟನ್ನೇ ನಾಶಪಡಿಸುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again