ಹೊಸಬಾಳೆ ವಿರುದ್ಧ ಮೊಕದ್ದಮೆ ಏಕೆ ತಪ್ಪಾಗುತ್ತದೆ?

`ಜಾತ್ಯತೀತ' ಮತ್ತು `ಸಮಾಜವಾದ' ಎಂಬ ಪದಗಳು ನಿಜಕ್ಕೂ ಭಾರತದ ಆತ್ಮವನ್ನು ಪ್ರತಿಬಿಂಬಿಸುವುದಾದರೆ, ಅದು ಸಾರ್ವಜನಿಕರ ಅಭಿಪ್ರಾಯಕ್ಕೆ, ಟೀಕೆ ವಿಮರ್ಶೆಗಳಿಗೆ ನಿಲುಕುವಂತಿರಬೇಕು, ಪೆÇಲೀಸ್ ಕ್ರಮಗಳಿಂದ ಮುಕ್ತವಾಗಿರಬೇಕು.


ಕರ್ನಾಟಕದ ಯುವ ಕಾಂಗ್ರೆಸ್ ಇತ್ತೀಚೆಗೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ವಿರುದ್ಧ ಪೆÇಲೀಸ್ ದೂರು ದಾಖಲಿಸಿರುವುದು ಅಸಮಂಜಸವಾಗಿ ಕಾಣುತ್ತದೆ. ಹೊಸಬಾಳೆ ಏನು ಹೇಳಿದ್ದಾರೆ ಎನ್ನುವುದಕ್ಕಿಂತಲೂ, ಈ ರೀತಿಯ ಕ್ರಮಗಳು ಭವಿಷ್ಯದ ಭಾರತದಲ್ಲಿ ಮುಕ್ತ ವಾಕ್ ಸ್ವಾತಂತ್ರ್ಯ ಮತ್ತು ಬೌದ್ಧಿಕ ಸಂವಾದಕ್ಕೆ ಉಂಟುಮಾಡಬಹುದಾದ ಅಪಾಯವನ್ನು ಸೂಚಿಸುತ್ತದೆ.

ಹೊಸಬಾಳೆ ಅವರು ಇತ್ತೀಚೆಗೆ ತುರ್ತುಪರಿಸ್ಥಿತಿಯನ್ನು ನೆನೆಯುವ ಅಭಿಯಾನದಲ್ಲಿ ಮಾತನಾಡುತ್ತಾ, ಸಂವಿಧಾನದ ಪೀಠಿಕೆಯಲ್ಲಿ `ಜಾತ್ಯತೀತ' ಮತ್ತು `ಸಮಾಜವಾದ' ಎಂಬ ಪದಗಳ ಸೇರ್ಪಡೆಯನ್ನು ಮರುಪರಿಷ್ಕರಿಸಿ ತೆಗೆದುಹಾಕಬೇಕು ಎಂದು ಹೇಳಿದ್ದರು. ಈ ಹೇಳಿಕೆಯು ಸಂವಿಧಾನದ ಮೇಲೆ ನಡೆಸಿದ ದಾಳಿ ಎಂದು ದೂರುದಾರರು ಆರೋಪಿಸಿದ್ದು, ಇದು ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವುದರಿಂದ, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಅಪರಾಧಿ ಮೊಕದ್ದಮೆಯನ್ನು ಹೂಡಲು ಅರ್ಹವಾಗಿದೆ ಎಂದು ವಾದಿಸುತ್ತಾರೆ.

ಆದರೆ ಇದು ವಾಸ್ತವವೇ?

ಮೂಲತಃ 1976ರಲ್ಲಿ ಸಂವಿಧಾನ ಪೀಠಿಕೆಯಲ್ಲಿ ಈ ಪದಗಳನ್ನು ಸೇರ್ಪಡೆ ಮಾಡಿದ್ದೇ ಒಂದು ವಿವಾದಾಸ್ಪದ ವಿಷಯವಾಗಿತ್ತು. ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ 42ರ ಮೂಲಕ ಇದನ್ನು ಅಳವಡಿಸಲಾಯಿತು. ಅಂದಿನ ಸರ್ವಾಧಿಕಾರಿ ವಾತಾವರಣದಲ್ಲಿ ಸಂಸತ್ತು ಸಹ ನಿರ್ಬಂಧಕ್ಕೊಳಗಾಗಿತ್ತು. ವಿರೋಧ ಪಕ್ಷದ ನಾಯಕರು ಜೈಲುಗಳಲ್ಲಿದ್ದರು. ಈ ಬದಲಾವಣೆಗೆ ಮುನ್ನ ಇಂಥ ಗಹನವಾದ ವಿಷಯದ ಬಗ್ಗೆ ಯಾವುದೇ ಅರ್ಥಪೂರ್ಣ ಚರ್ಚೆ ನಡೆಯಲಿಲ್ಲ. ಹಲವು ಸಂವಿಧಾನ ತಜ್ಞರು ಆಗಲೂ, ಈಗಲೂ ಸಹ ಈ ಕ್ರಮದ ನ್ಯಾಯೋಚಿತತೆಯನ್ನು, ಪ್ರಜಾಸತ್ತಾತ್ಮಕ ಆಶಯಗಳನ್ನು ಪ್ರಶ್ನಿಸಿದ್ದರು.

ಬಹುಮುಖ್ಯ ಸಂಗತಿ ಎಂದರೆ ಜಾತ್ಯತೀತತೆ ಮತ್ತು ಸಮಾಜವಾದಿ ತತ್ವಗಳಿಗೆ ಭಾರತದ ಬದ್ಧತೆಯು ತುರ್ತುಪರಿಸ್ಥಿತಿಯೊಂದಿಗೆ ಆರಂಭವಾಗಲಿಲ್ಲ ಅಥವಾ ಈ ಪದಗಳ ಸೇರ್ಪಡೆಯ ಮೂಲಕ ಆಗಲಿಲ್ಲ. 1950ರಲ್ಲಿ ಅರ್ಪಿಸಲಾದ ಸಂವಿಧಾನವು ಆಗಲೇ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಚ್ಛೇದ 25-28ರಲ್ಲಿ, ಕಾನೂನಿನ ದೃಷ್ಟಿಯಲ್ಲಿ ಸಮಾನತೆಯನ್ನು ಅನುಚ್ಛೇದ 14ರ ಮೂಲಕ, ಸಾಮಾಜಿಕ-ಆರ್ಥಿಕ ನ್ಯಾಯ (ನಿರ್ದೆಶಕ ತತ್ವಗಳ ಮೂಲಕ) ಜಾರಿಗೊಳಿಸಿದೆ. ಹಾಗಾಗಿ 1976ಕ್ಕೂ ಮುನ್ನ ಭಾರತ ಜಾತ್ಯತೀತ ಅಥವಾ ಸಮಾಜವಾದಿ ಆಗಿರಲಿಲ್ಲ ಎನ್ನುವುದು ಚಾರಿತ್ರಿಕವಾಗಿ ವಾಸ್ತವವಲ್ಲ.

ಆದ್ದರಿಂದ ಒಬ್ಬ ಸಾರ್ವಜನಿಕ ಬುದ್ಧಿಜೀವಿ, ರಾಜಕಾರಣಿ ಅಥವಾ ನಾಗರಿಕ ಇಂದು "ಈ ಪದಗಳು ಪೀಠಿಕೆಯಲ್ಲಿ ಇರಬೇಕೇ" ಎಂದು ಪ್ರಶ್ನಿಸುವುದು ರಾಜದ್ರೋಹವಾಗುವುದೇ? ಅಥವಾ ಇದು ನ್ಯಾಯಯುತವಾದ ರಾಜಕೀಯ ಸಂವಾದವೇ?

ಭಾರತದ ಸುಪ್ರೀಂಕೋರ್ಟ್ ಆರಂಭದಿಂದಲೂ ನಿರಂತರವಾಗಿ ಪ್ರತಿಪಾದಿಸುತ್ತಿರುವುದು, ಮುಕ್ತ ವಾಕ್ ಸ್ವಾತಂತ್ರ್ಯದ ಹಕ್ಕು ಸಂವಿಧಾನವನ್ನು ಟೀಕಿಸುವ ಹಕ್ಕನ್ನೂ, ತಿದ್ದುಪಡಿಗೆ ಆಗ್ರಹಿಸುವ ಹಕ್ಕನ್ನೂ, ಯಥಾಸ್ಥಿತಿಯನ್ನು ಪ್ರಶ್ನಿಸುವ ಹಕ್ಕನ್ನೂ ನೀಡುತ್ತದೆ. ಆದರೆ ಈ ಬೇಡಿಕೆಗಳು ಹಿಂಸೆ ಅಥವಾ ದ್ವೇಷಕ್ಕೆ ಕಾರಣವಾಗಕೂಡದು. ಶ್ರೇಯಾ ಘೋಷಾಲ್ ವರ್ಸಸ್ ಕೇಂದ್ರ ಸರ್ಕಾರ ಮೊಕದ್ದಮೆಯಲ್ಲಿ ನ್ಯಾಯಾಲಯವು ವಾಕ್ ಸ್ವಾತಂತ್ರ್ಯದ ಮೇಲೆ ಅನಗತ್ಯ ವಿರೋಧ ಹೇರಲಾಗುವುದಿಲ್ಲ, ಹಾಗಾಗಿ ಅದನ್ನು ಅಪರಾಧ ಎಂದು ಕಾನೂನು ಕ್ರಮ ಜರುಗಿಸಲಾಗುವುದಿಲ್ಲ ಎಂದು ಹೇಳಿದೆ. ಕೇದಾರ್ ನಾಥ್ ಸಿಂಗ್ ವರ್ಸಸ್ ಬಿಹಾರ ಸರ್ಕಾರದ ಪ್ರಕರಣದಲ್ಲಿ ಪ್ರಭುತ್ವ ಅಥವಾ ಸಂವಿಧಾನವನ್ನು ಟೀಕಿಸುವುದು ರಾಜದ್ರೋಹ ಆಗುವುದಿಲ್ಲ, ಅದರಿಂದ ಹಿಂಸೆ ಅಥವಾ ಸಾಮಾಜಿಕ ಕ್ಷೋಭೆಗೆ ಪ್ರಚೋದನೆಯಾದರೆ ಮಾತ್ರ ಆಗುತ್ತದೆ ಎಂದು ಹೇಳಿದೆ.

ಈ ಮಾನದಂಡದ ಪ್ರಕಾರ ಹೊಸಬಾಳೆ ಅವರ ಹೇಳಿಕೆಯು ಕಾನೂನುಬಾಹಿರವೂ ಅಲ್ಲ ಅಥವಾ ಹಿಂಸೆಯನ್ನು ಪ್ರಚೋದಿಸುವುದೂ ಇಲ್ಲ. ಇದು ಕೇವಲ ರಾಜಕೀಯ ಉದ್ದೇಶದ ಹೇಳಿಕೆಯಾಗಿದ್ದು, ಒಂದು ರೀತಿಯಲ್ಲಿ ಪ್ರಚೋದನೆಯಾಗಿ ಕಾಣುವುದಾದರೂ ಇದು ಪ್ರಜಾಪ್ರಭುತ್ವದಲ್ಲಿ ರಕ್ಷಿಸಲ್ಪಡುವ ವಾಕ್ ಸ್ವಾತಂತ್ರ್ಯದ ಇತಿಮಿತಿಯೊಳಗೇ ಇರುತ್ತದೆ. ಇಲ್ಲಿ ನಿಜವಾದ ಅಪಾಯ ಇರುವುದು ಅವರ ಮಾತುಗಳಲ್ಲಿ ಅಲ್ಲ ಬದಲಾಗಿ ಅಪರಾಧಿಕ ಕಾನೂನನ್ನು ಬಳಸಿ ಸಾರ್ವಜನಿಕ ಸಂವಾದವನ್ನು, ಚರ್ಚೆಯನ್ನು ಹತ್ತಿಕ್ಕುವುದರಲ್ಲಿ. ಪೆÇಲೀಸರಿಗೆ ಸಾಂವಿಧಾನಿಕ ವಿಚಾರಧಾರೆಗಳ ಚರ್ಚೆಯನ್ನು ನಿಬರ್ಂಧಿಸುವ ಹಕ್ಕು ನೀಡುವುದು ಬೌದ್ಧಿಕ ಜಡತ್ವಕ್ಕೆ ಕಾರಣವಾಗುತ್ತದೆ.

ಪ್ರಜಾಪ್ರಭುತ್ವವು ಮುಕ್ತ ಸಂವಾದ, ವಿಚಾರಣೆಯನ್ನು ಅಪೇಕ್ಷಿಸುತ್ತದೆ. ಸಾಂವಿಧಾನಿಕ ಮೌಲ್ಯಗಳು ಈ ಸಂವಾದಗಳಿಂದ ದುರ್ಬಲವಾಗುವುದಿಲ್ಲ. ಬದಲಾಗಿ ಇನ್ನೂ ಬಲಗೊಳ್ಳುತ್ತವೆ. `ಜಾತ್ಯತೀತ' ಮತ್ತು `ಸಮಾಜವಾದ' ಎಂಬ ಪದಗಳು ನಿಜಕ್ಕೂ ಭಾರತದ ಆತ್ಮವನ್ನು ಪ್ರತಿಬಿಂಬಿಸುವುದಾದರೆ, ಅದು ಸಾರ್ವಜನಿಕರ ಅಭಿಪ್ರಾಯಕ್ಕೆ, ಟೀಕೆ ವಿಮರ್ಶೆಗಳಿಗೆ ನಿಲುಕುವಂತಿರಬೇಕು, ಪೆÇಲೀಸ್ ಕ್ರಮಗಳಿಂದ ಮುಕ್ತವಾಗಿರಬೇಕು.

ಹೊಸಬಾಳೆ ಅವರ ವಿರುದ್ಧ ಸಲ್ಲಿಸಲಾಗಿರುವ ದೂರು ಅದರ ನಿಲುವಿನ ಚೌಕಟ್ಟಿನೊಳಗೇ ನೋಡಬೇಕಾಗುತ್ತದೆ. ಇದು ಅಪಾಯಕಾರಿ ಕಾನೂನಾತ್ಮಕ ಪೂರ್ವನಿದರ್ಶನದ ಅಪಾಯವನ್ನು ಮುಂದಿಟ್ಟಿದೆ. ಇದನ್ನು ನಿರಾಕರಿಸಬೇಕಿದೆ. ಕಾನೂನಾತ್ಮಕವಾಗಿ ಮಾತ್ರವೇ ಅಲ್ಲ ತಾತ್ವಿಕವಾಗಿಯೂ ನಿರಾಕರಿಸಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again