ಕರ್ಣಾಟಕ ಬ್ಯಾಂಕ್ ಸ್ಥಳೀಯ ನಾಯಕತ್ವದಲ್ಲಿ ಮುನ್ನಡೆಯಲು ಅವಕಾಶ

ರಾಘವೇಂದ್ರ ಶ್ರೀನಿವಾಸ ಭಟ್ ಎಂಬ 38 ವರ್ಷದ ಕರ್ಣಾಟಕ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಲೇ ಬೆಳೆದುಬಂದ ವ್ಯಕ್ತಿಯನ್ನು ಮಧ್ಯಂತರ ಎಂ ಡಿ ಮತ್ತು ಸಿಇಒ ಆಗಿ ನೇಮಿಸುವ ಮೂಲಕ, ತನ್ನ ಮೂಲ ತತ್ವಗಳಿಗೆ ಬ್ಯಾಂಕು ಮರಳಲು ಸಾಧ್ಯವಾಗಿದೆ.


ನಾಡಿನ ಅತ್ಯಂತ ಹಳೆಯ ಮತ್ತು ಗೌರವಯುತ ಖಾಸಗಿ ಬ್ಯಾಂಕ್‍ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್, ಯಾವುದೇ ಕಾಲಘಟ್ಟದಲ್ಲಾದರೂ ಸಾಂಪ್ರದಾಯಿಕ ಅರ್ಥದಲ್ಲಿ ಕೇವಲ ಲೇವಾದೇವಿ ಸಂಸ್ಥೆಯಾಗಿ ಕಂಡಿಲ್ಲ; ಬದಲಾಗಿ, ಜನರ ನಾಡಿಮಿಡಿತ ಬಲ್ಲ ವಿಶ್ವಾಸಾರ್ಹ ಸಂಸ್ಥೆಯಾಗಿ ಪ್ರಸಿದ್ಧಿ ಪಡೆದಿದೆ. ಒಂದು ಶತಮಾನಕ್ಕೂ ಹಿಂದೆ  ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸ್ಥಾಪಿಸಲಾದ ಈ ಸಂಸ್ಥೆ  ಕೇವಲ ಪ್ರಚಾರಗಳ ಮೂಲಕ ಅಥವಾ ರಾತ್ರೋರಾತ್ರಿಯ ಪ್ರಗತಿ ಸಾಧನೆಯ ಕ್ಲೇಮುಗಳಿಂದ ಖ್ಯಾತಿ ಪಡೆದ ಸಂಸ್ಥೆಯಲ್ಲ. ಸಣ್ಣ ಖಾತೆದಾರರಿಗೆ, ಕೃಷಿಕರಿಗೆ, ಸ್ಥಳೀಯ ವರ್ತಕರಿಗೆ ಮತ್ತು ಕಾಪೆರ್Çೀರೇಟ್ ಉದ್ಯಮಿಗಳಿಗೂ ಉತ್ತಮ ಹಾಗೂ ಸುಸ್ಥಿರ ಸೇವೆ ಸಲ್ಲಿಸುವ ಮೂಲಕ ಇಂದು ಪ್ರತಿಷ್ಠಿತ ಸ್ಥಾನದಲ್ಲಿದೆ. ಜನರ ವಿಶ್ವಾಸ ಗಳಿಸುತ್ತಲೇ ಬ್ಯಾಂಕ್ ಪ್ರಗತಿ ಸಾಧಿಸಿದೆ. ಈ ವಿಶ್ವಾಸ ಗಳಿಸಲು ಮುಖ್ಯ ಕಾರಣ ಎಂದರೆ ಈ ಬ್ಯಾಂಕಿನ ವ್ಯವಹಾರಗಳನ್ನು ನಿರ್ವಹಿಸಿ ಅದನ್ನು ಬೆಳೆಸಿದ ವ್ಯಕ್ತಿಗಳೆಲ್ಲರೂ ಬ್ಯಾಂಕಿನ  ಜೊತೆಗೇ ಬೆಳೆದವರು ಹಾಗೂ ಇಲ್ಲಿಯ ಕಾರ್ಯ ಸಂಸ್ಕøತಿ, ಭಾವನೆ ಮತ್ತು ಉದ್ದೇಶಗಳಲ್ಲಿ ಅಪಾರ ಶ್ರದ್ಧೆ ವಿಶ್ವಾಸ ಇರಿಸಿದ್ದವರು.

ಹಲವು ದಶಕಗಳ ಕಾಲ, ಹಿರಿಯ ಕಾರ್ಯನಿರ್ವಾಹಕರ ನೇಮಕವು ಔಪಚಾರಿಕವಾಗಿ ಆರ್‍ಬಿಐ ಜವಾಬ್ದಾರಿಯಾದ ನಂತರವೂ ಸಹ ರಿಸರ್ವ್‍ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕಿನ ಶೇರುದಾರರು, ಆಡಳಿತ ಮಂಡಳಿಯ ನಡುವೆ ಪರಸ್ಪರ ವಿಶ್ವಾಸಪೂರ್ವಕ ಸಂಬಂಧ ಏರ್ಪಟ್ಟಿದೆ. ಒಂದು ಸಂಸ್ಥೆಯ ಮತ್ತು ಅದರ ಗ್ರಾಹಕರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿರುವ ಒಳಗಿನವರು ಮಾತ್ರವೇ ಬ್ಯಾಂಕಿನ ಪ್ರಗತಿಗೆ ಕಾರಣರಾಗುತ್ತಾರೆ ಎಂಬ ನಂಬಿಕೆಯನ್ನು ಆರ್‍ಬಿಐ ಸಹ ಮಾನ್ಯ ಮಾಡಿತ್ತು.  ಈ ಸಮೀಕರಣವು, ಶ್ರೀ ಕೃಷ್ಣ ಹರಿಹರ ಶರ್ಮ ಮತ್ತು ಶೇಖರ್ ರಾವ್ ಅವರು ಅಧಿಕಾರ ವಹಿಸಿಕೊಳ್ಳುವವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿತ್ತು.

ಶತಮಾನದ ಸಂಸ್ಕೃತಿಯನ್ನು ಸಡಿಲಗೊಳಿಸಿದ ಸಂಬಂಧಗಳು

ಶರ್ಮ ಅವರನ್ನು ಬ್ಯಾಂಕಿನ ಅಧ್ಯಕ್ಷ ಮತ್ತು ಸಿಇಒ ಆಗಿ ಹಾಗೂ ರಾವ್ ಅವರನ್ನು ಕಾರ್ಯವಾಹಿ ನಿರ್ದೇಶಕರಾಗಿ ನೇಮಕ ಮಾಡಿದಾಗ, ಅದು ಪರಂಪರೆಯ ತದ್ವಿರುದ್ಧ ದಿಕ್ಕಿನ ಹಾದಿಯಾಗಿತ್ತು. ಈ ಇಬ್ಬರೂ ಅಧಿಕಾರಿಗಳು ಕರ್ಣಾಟಕ ಬ್ಯಾಂಕಿನಲ್ಲಿ ಬೆಳೆದವರಲ್ಲ. ಇಬ್ಬರೂ ಕರಾವಳಿಯ ಅಥವಾ ಮಂಗಳೂರಿನ ಮೌಲ್ಯಗಳಿಗೆ ಬದ್ಧರಾದವರಲ್ಲ ಅಥವಾ ಮೂಲತಃ ಬ್ಯಾಂಕಿಂಗ್ ನೀತಿ-ನಿಯಮಗಳಿಗೂ ಒಳಪಟ್ಟವರಲ್ಲ. ಇವರು ಸಂಸ್ಥೆಯ ಬೆನ್ನೆಲುಬಾಗಿದ್ದ, ಹಲವು ಪೀಳಿಗೆಗಳ ಕಾಲ ಬ್ಯಾಂಕಿನ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದ್ದ,  ಸಾವಿರಾರು ಸಿಬ್ಬಂದಿ ಮತ್ತು ಭಾಗಿದಾರರ ವಿಶ್ವಾಸವನ್ನು ಗೆಲ್ಲಲು  ಪ್ರಯತ್ನ ಪಡಲಿಲ್ಲ. ಬಹುತೇಕರಿಗೆ ಇವರು ಅಪರಿಚಿತರಾಗಿಯೇ ಉಳಿದಿದ್ದರು ಅಲ್ಲದೆ ತಮ್ಮ ಅಧಿಕಾರಶಾಹಿ ಧೋರಣೆಯ ಪರಿಣಾಮವಾಗಿ ಪ್ರತ್ಯೇಕತಾವಾದಿಗಳಾಗಿಯೇ ಉಳಿದಿದ್ದರು.

ಇವರ ನಾಯಕತ್ವದ ಶೈಲಿ ಬಹುಮಟ್ಟಿಗೆ ತಾಂತ್ರಿಕವಾಗಿದ್ದು, ಕೇವಲ ಶುಷ್ಕ ಮತ್ತು ವ್ಯಾವಹಾರಿಕವೆನಿಸಿತ್ತು.  ಅರ್ಥಾತ್ ಅವರಿಗೆ ಸ್ವಯಂ ಹಿತಾಸಕ್ತಿಯೇ ಪ್ರಧಾನವಾಗಿತ್ತು. ಎಂಡಿ ಮತ್ತು ಎಡಿ ಅವರ ಏಕಪಕ್ಷೀಯ ನಿರ್ಧಾರಗಳು, ಅಪಾರದರ್ಶಕ ವಹಿವಾಟುಗಳು, ಹಣಕಾಸು ಅವ್ಯವಹಾರಗಳು ಕಾಣಿಸಿಕೊಳ್ಳಲು ಆರಂಭಿಸಿದವು. ತತ್ಪರಿಣಾಮವಾಗಿ ಆಡಳಿತವೇ ತೀವ್ರವಾದ ಬಿಕ್ಕಟ್ಟಿಗೆ ಸಿಲುಕುವಂತಾಯಿತು. ಬ್ಯಾಂಕಿನ ಲೆಕ್ಕ ಪರಿಶೋಧಕರು ಅನೇಕ ಪ್ರಶ್ನಾರ್ಹ ವೆಚ್ಚಗಳನ್ನು, ಹಣಕಾಸು ದುರುಪಯೋಗವನ್ನು ಅಧಿಕಾರ ವ್ಯಾಪ್ತಿ ಮೀರಿ ನಡೆಸಿರುವುದನ್ನು ಪ್ರಶ್ನಿಸಿದ್ದರು. ಶರ್ಮ ಮತ್ತು ರಾವ್ ಇಬ್ಬರೂ ಸಹ ಗೆಲುವಿನ ಸಂಭ್ರಮದಿಂದ ರಾಜೀನಾಮೆ ನೀಡದೆ, ಅಪಮಾನಕ್ಕೊಳಗಾಗಿ ನಿರ್ಗಮಿಸಿದ್ದರು. ಇವರ ನಿರ್ಗಮನವು ಕೇವಲ ಆಡಳಿತದ ಮೇಲ್‍ಸ್ತರದ ಬದಲಿಕೆ ಪ್ರಶ್ನೆಯಾಗಲಿಲ್ಲ, ಬದಲಾಗಿ ಮುಂದಾಳತ್ವದ ಆಯ್ಕೆಯಲ್ಲಿದ್ದ ವ್ಯವಸ್ಥಿತ ವೈಫಲ್ಯದ ಸಂಕೇತವಾಗಿತ್ತು.

ಒಳಗಿನವರು ತೆರೆಮರೆಯಲ್ಲಿ ಹೇಳುವಂತೆ, ಈ ಇಬ್ಬರು ಅಧಿಕಾರಿಗಳು ಮತ್ತು ದಶಕಗಳ ಕಾಲ ಬ್ಯಾಂಕಿನಲ್ಲಿ ಸಕ್ರಿಯವಾಗಿದ್ದವರ ನಡುವೆ ಯಾವುದೇ ವಿಶ್ವಾಸ ಇರಲಿಲ್ಲ.

ಸಕಾಲಿಕ ಪರಿಹಾರ ಕಾರ್ಯಗಳು

ಅದೃಷ್ಟವಶಾತ್, ಬ್ಯಾಂಕಿನ ಆಡಳಿತ ಮಂಡಲಿಯು, ಆರ್‍ಬಿಐ ಬೆಂಬಲದೊಂದಿಗೆ, ಈ ಕುಸಿತ ಇನ್ನೂ ತೀವ್ರಗೊಳ್ಳುವ  ಮುನ್ನವೇ ಕ್ರಮ ಕೈಗೊಂಡಿತ್ತು. ರಾಘವೇಂದ್ರ ಶ್ರೀನಿವಾಸ ಭಟ್ ಎಂಬ 38 ವರ್ಷದ ಕರ್ಣಾಟಕ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಲೇ ಬೆಳೆದುಬಂದ ವ್ಯಕ್ತಿಯನ್ನು ಮಧ್ಯಂತರ ಎಂ ಡಿ ಮತ್ತು ಸಿಇಒ ಆಗಿ ನೇಮಿಸುವ ಮೂಲಕ, ತನ್ನ ಮೂಲ ತತ್ವಗಳಿಗೆ ಬ್ಯಾಂಕು ಮರಳಲು ಸಾಧ್ಯವಾಗಿದೆ.

ರಾಘವೇಂದ್ರ ಭಟ್ಟರು ಶರ್ಮ ಮತ್ತು ರಾವ್ ಅವರಲ್ಲಿ ಕಾಣದಿದ್ದ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾರೆ. 1981ರಲ್ಲಿ ಗುಮಾಸ್ತ ಹುದ್ದೆಯ ಮೂಲಕ ಬ್ಯಾಂಕ್ ಪ್ರವೇಶಿಸಿದ ಇವರು ಬಡ್ತಿ ಪಡೆಯುವ ಮೂಲಕ ಉನ್ನತ ಶ್ರೇಣಿಗೆ ಏರಿದ್ದರು. ಮಾನವ ಸಂಪನ್ಮೂಲಗಳು, ಮಾಹಿತಿ ತಂತ್ರಜ್ಞಾನ, ಗ್ರಾಮೀಣ ಬ್ಯಾಂಕಿಂಗ್, ಖಜಾನೆ, ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಬ್ಯಾಂಕಿನ ಮುಖ್ಯ ನಿರ್ವಾಹಕ ಅಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಹುಮುಖ್ಯವಾಗಿ, ಭಟ್ ಅವರು ಬ್ಯಾಂಕಿನ ಇಕೋ ಸಿಸ್ಟಮ್ಮಿಗೆ ಸೇರಿದವರಾಗಿದ್ದು, ಬ್ಯಾಂಕಿನ ಗ್ರಾಹಕರು, ಸಾಮಾನ್ಯ ಜನರು, ಅದರ ಚಲನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅರಿತವರಾಗಿದ್ದಾರೆ. ಇದು ಅವರ ಸ್ವಾನುಭವದ ಫಲವಾಗಿದೆ.

ಭಟ್ ಅವರ ನೇಮಕ ಮೂರು ತಿಂಗಳ ಕಾಲ ಮಧ್ಯಂತರವಾಗಿದ್ದರೂ, ಅದರ ಸಾಂಕೇತಿಕ ಮೌಲ್ಯ ಅಗಾಧವಾಗಿದೆ. ಹೂಡಿಕೆದಾರರಿಗೆ, ಠೇವಣಿದಾರರಿಗೆ ಮತ್ತು ಸಿಬ್ಬಂದಿಗೆ, ಬ್ಯಾಂಕ್ ಮತ್ತೆ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ, ಅಪಭ್ರಂಶಗಳೆಲ್ಲವೂ ನಿವಾರಣೆಯಾಗಿದೆ ಎಂಬ ಸಂದೇಶವನ್ನು ಈ ನೇಮಕವು ನೀಡಿತ್ತು.

ನಾಯಕತ್ವ ಪರಂಪರೆಯೊಡನೆ ಹೊಂದಿಕೊಳ್ಳಬೇಕು.

ಶರ್ಮ ಮತ್ತು ರಾವ್ ಅವರ ಅವಧಿಯಲ್ಲಿ ಬ್ಯಾಂಕಿನ ಚರಿತ್ರೆಯಲ್ಲಿ ಸಂಭವಿಸಿದ ಘಟನೆಗಳು, ಪ್ರಕರಣಗಳು, ನಗಣ್ಯ ಎನಿಸುವುದಿಲ್ಲ. ಬ್ಯಾಂಕಿನ ಪರಂಪರೆಯನ್ನು, ಅದರೊಡನೆ ಸಂಬಂಧವೇ ಇಲ್ಲದಿರುವ ತಾಂತ್ರಿಕ ತಜ್ಞರ ಕೈಗೆ ಒಪ್ಪಿಸಕೂಡದು ಎನ್ನುವ ವಾಸ್ತವವನ್ನು ನೆನಪಿಸಿದೆ. ಇಂತಹ ಅಧಿಕಾರಿಗಳು ಉತ್ತಮವಾದ ಸಾಧನೆಯ ಹಿನ್ನೆಲೆ ಹೊಂದಿದ್ದಾರೆ ಎಂಬ ಕಾರಣಕ್ಕಾಗಿಯೇ ನೇಮಿಸುವುದು ಈ ರೀತಿಯ ದುರಂತಗಳಿಗೆ ಕಾರಣವಾಗುತ್ತದೆ.  ಸಾಂಸ್ಥಿಕ ನಾಯಕತ್ವವು ಉತ್ತರದಾಯಿತ್ವದ ಪ್ರಜ್ಞೆಯೊಂದಿಗೆ, ಕೇವಲ ನಿಯಂತ್ರಣಾಧಿಕಾರಕ್ಕೆ ಅಥವಾ ಬ್ಯಾಂಕಿನ ಬ್ಯಾಲೆನ್ಸ್‍ಷೀಟ್‍ಗೆ ಜವಾಬ್ದಾರರಾಗಿರದೆ, ಅದರ ಸಂಸ್ಕೃತಿ, ಸಾಮುದಾಯಿಕ ಅಸ್ಮಿತೆ ಮತ್ತು ನಿರಂತರತೆಗೆ ಉತ್ತರದಾಯಿಗಳಾಗಿರಬೇಕು. ನಾಯಕತ್ವವು ಸದಾ ಕಾಲವೂ ಸಂಸ್ಥೆಯ ಗತ ಚರಿತೆಯ ಜೊತೆಗೆ ಹೆಜ್ಜೆ ಹಾಕಬೇಕು.

ಎಲ್ಲ ಖಾಸಗಿ ಬ್ಯಾಂಕುಗಳು ಗಮನಿಸಬೇಕಾದ ಸಂದೇಶ ಎಂದರೆ, ಹೊರಗಿನ ಪ್ರತಿಭೆಗಳು ಹೊಸ ಆಲೋಚನೆಗಳನ್ನು ಅಳವಡಿಸಬಹುದು, ಆದರೆ ಅದು ಸಂಬಂಧಗಳನ್ನು ಹಾಳುಮಾಡಿ, ಪ್ರಕ್ಷುಬ್ಧಗೊಳಿಸುವಂತಿರಬಾರದು. ವಿಶ್ವಾಸವೇ ಮೂಲ ಧ್ಯೇಯವಾಗಿ ಬ್ಯಾಂಕಿನ ವಹಿವಾಟುಗಳು ನಡೆಯುವಾಗ ಈ ರೀತಿ ಸಾಂಸ್ಕøತಿಕವಾಗಿ ಸಂಬಂಧ ಹೊಂದಿರದ ವ್ಯಕ್ತಿಗಳಿಗೆ ಮುಂದಾಳತ್ವ ನೀಡುವುದು, ಅಪಾಯಕಾರಿಯೂ ಹಾನಿಕಾರಕವೂ ಆಗಿರುತ್ತದೆ.

ಭವಿಷ್ಯದ ಭರವಸೆಯ ಹಾದಿ

ಕರ್ಣಾಟಕ ಬ್ಯಾಂಕ್ ಈ ನಾಯಕತ್ವದಿಂದ ಬಚಾವ್ ಆಗಿರುವುದಷ್ಟೇ ಅಲ್ಲದೆ, ಅದು ಪುನರ್‍ನಿರ್ಮಾಣದತ್ತ ನಡೆದಿದೆ. ವಿಶ್ವಾಸಭರಿತ ಒಳಗಿನ ವ್ಯಕ್ತಿ ನಾಯಕತ್ವ ವಹಿಸಿರುವುದರಿಂದ, ಅದು ಅಲ್ಪ ಕಾಲಿಕವೇ ಆದರೂ ಸಹ, ಸಾರ್ವಜನಿಕ ವಿಶ್ವಾಸವನ್ನು ಮರಳಿ ಗಳಿಸಲು ಮತ್ತು ಬ್ಯಾಂಕಿನ ಸ್ಥಾಪಕ ಮೂಲ ತತ್ವಗಳನ್ನು ಮರುಸ್ಥಾಪಿಸಲು ನೆರವಾಗುತ್ತದೆ. ಆದರೆ ಈ ಕೆಲಸ ಇನ್ನೂ ಪೂರ್ತಿಯಾಗಿಲ್ಲ. ಬ್ಯಾಂಕಿನ ಆಡಳಿತ ಮಂಡಲಿಯ ನಿರ್ಣಯಗಳಲ್ಲಿ ಪಾರದರ್ಶಕತೆ  ಮತ್ತು ಸಂಸ್ಥೆಯ ಚರಿತ್ರೆಯೊಡನೆ ಗುರುತಿಸಿಕೊಳ್ಳುವ ಉತ್ತರಾಧಿಕಾರಿಗಳ ಕ್ರಮಬದ್ಧ ಯೋಜನೆಯ ಮೂಲಕ ಇದನ್ನು ಸಾಧಿಸಬಹುದಾಗಿದೆ.

ಅಂತಿಮವಾಗಿ, ಈ ಪ್ರಕರಣದಿಂದ ಒಂದು ಪ್ರಬಲವಾದ, ಸರಳ ಸಂದೇಶವಂತೂ ಹೊರಬಂದಿದೆ. ವಿಶ್ವಾಸದ ಬುನಾದಿಯ ಮೇಲೆ ನಿರ್ಮಾಣವಾದ ಬ್ಯಾಂಕ್ ಒಂದು ವಿಶ್ವಾಸ ಎಂಬ ಪದದ ಅರ್ಥವನ್ನೇ ಅರಿಯದವರು ನಿರ್ವಹಿಸಿದರೆ ಅದು ಉದ್ಧಾರವಾಗುವುದಿಲ್ಲ. ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸುವ ವ್ಯಕ್ತಿಯ ನೇಮಕಾತಿಯ ಮೂಲಕ ಕರ್ಣಾಟಕ ಬ್ಯಾಂಕ್ ತನ್ನ ವರ್ಚಸ್ಸನ್ನು ಉಳಿಸಿಕೊಂಡಿದೆ ಅಲ್ಲದೆ, ಬ್ಯಾಂಕಿನ ಮೂಲ ತಾತ್ವಿಕತೆಯನ್ನೂ ರಕ್ಷಿಸಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again