ಕರ್ನಾಟಕದ ರಾಜಕೀಯದಲ್ಲಿ ಮಠಾಧೀಶರ ಮೇಲಾಟ
ಧಾರ್ಮಿಕ ನಾಯಕರು ರಾಜಕೀಯದಿಂದ ದೂರವಿರುವವರೆಗೂ ಕರ್ನಾಟಕವು ಧಾರ್ಮಿಕ ಜನಪ್ರಿಯತೆಯನ್ನೇ ಅವಲಂಬಿಸಿಕೊಂಡು, ಪ್ರಜಾಪ್ರಭುತ್ವದ ಭವಿಷ್ಯವನ್ನು ಹಾಳುಮಾಡುವುದು ಖಚಿತ.
ಕರ್ನಾಟಕ ಇಂದು ಪ್ರಧಾನವಾಗಿ ಎದ್ದುಕಾಣುವುದು ಅದರ ಪಗ್ರತಿಪರ ರಾಜಕಾರಣಕ್ಕಾಗಿಯೋ ಅಥವಾ ಅತ್ಯುತ್ತಮ ಆಡಳಿತಕ್ಕಾಗಿಯೋ ಅಲ್ಲ. ಬದಲಾಗಿ, ರಾಜ್ಯ ರಾಜಕಾರಣದಲ್ಲಿ ನೇರವಾಗಿ ಯಾವುದೇ ಮುಜುಗರ ಇಲ್ಲದೆ ಮಠಾಧಿಪತಿಗಳು, ಸ್ವಾಮಿಗಳು ರಾಜಕಾರಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಕಾರಣಕ್ಕಾಗಿ. ಸಮಾಜಕ್ಕೆ ಆಧ್ಯಾತ್ಮಿಕ ಅಥವಾ ನೈತಿಕ ಸಾಂತ್ವನ ನೀಡುವುದಕ್ಕಿಂತಲೂ ಹೆಚ್ಚಾಗಿ ಅನೇಕ ಸ್ವಾಮಿಗಳು ರಾಜಕೀಯ ದಲ್ಲಾಳಿಗಳಾಗಿ ರೂಪುಗೊಂಡಿದ್ದು, ಜಾತಿ ವಕ್ತಾರರಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಜಾತಿಗಳ ನಿರ್ಣಾಯಕ ಮುಂದಾಳತ್ವವನ್ನೂ ವಹಿಸಿಕೊಂಡಿದ್ದಾರೆ. ಈ ವಿದ್ಯಮಾನವು ಅಪಾಯಕಾರಿಯಾಗಿರುವುದಷ್ಟೇ ಅಲ್ಲದೆ, ಗಂಭೀರವಾಗಿ ಪರಿಶೀಲನೆಗೊಳಪಡಬೇಕಾದ ವಿಷಯವಾಗಿದೆ.
ಇತ್ತೀಚಿನ ಘಟನೆಯೊಂದರಲ್ಲಿ ಲಿಂಗಾಯತ ಸಂಪ್ರದಾಯದ ರಂಭಾಪುರಿ ಸ್ವಾಮಿಯು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಲಾಬಿ ಮಾಡಿರುವುದು ಕೇವಲ ಮೇಲ್ನೋಟದ ಅಂಶವಷ್ಟೆ. ಈ ಆಗ್ರಹವನ್ನು ಸಾರ್ವಜನಿಕವಾಗಿ ಮಾಡಿರುವುದು, ಅದೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲದಿರುವ ಸಮಯದಲ್ಲಿ ಮಂಡಿಸಿರುವುದು ಧರ್ಮ ಮತ್ತು ಆಳ್ವಿಕೆಯ ನಡುವೆ ಇರುವ ಅಂತರ ಎಷ್ಟು ಕಡಿಮೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇನ್ನೂ ಎದ್ದುಕಾಣುವ ಅಂಶವೆಂದರೆ, ಇದು ಪ್ರತ್ಯೇಕ ಪ್ರಸಂಗವೇನಲ್ಲ. ಸಿದ್ದರಾಮಯ್ಯ ಅವರ ಏಳಿಗೆಯ ಹಿಂದೆ ಕುರುಬ ಮತ್ತು ದಲಿತ ಸ್ವಾಮಿಗಳ ಪ್ರಭಾವ ಇದೆ. ಶಿವಕುಮಾರ್ ಅವರನ್ನು ಪ್ರಬಲ ಒಕ್ಕಲಿಗ ಮಠಾಧೀಶರು ಬೆಂಬಲಿಸಿದ್ದಾರೆ. ಬಿ ಎಸ್ ಯಡಿಯೂರಪ್ಪ ಒಂದು ಕಾಲದಲ್ಲಿ ತಮ್ಮ ಬೆನ್ನ ಹಿಂದೆ ಲಿಂಗಾಯತ ಮಠಾಧೀಶರ ದೊಡ್ಡ ದಂಡನ್ನೇ ಹೊಂದಿದ್ದರು. ಉದಾಹರಣೆಗೆ ದಿಂಗಾಲೇಶ್ವರ ಸ್ವಾಮಿ ಜಗದೀಶ್ ಶೆಟ್ಟರ್ ಅವರ ಪರವಾಗಿ ಒಂದು ರಾಜಕೀಯ ವಾತಾವರಣವನ್ನೇ ಸೃಷ್ಟಿಸಿದ್ದರು. ಇದು ಆಧ್ಯಾತ್ಮಿಕ ಮಾರ್ಗದರ್ಶನ ಎನ್ನುವುದಕ್ಕಿಂತಲೂ ಕಾರ್ಯತಂತ್ರದ ಮೈತ್ರಿ ಎನ್ನಬಹುದು.
ಈ ವಿಷಯದ ಮೂಲ ಇರುವುದು ಜಾತಿ ಆಧಾರಿತ ಧಾರ್ಮಿಕ ವಶೀಲಿಬಾಜಿಯ ಪ್ರಕ್ರಿಯೆಯಲ್ಲಿ. ಸ್ವಾಮಿಗಳು ಈಗ ಕೇವಲ ಆಶ್ರಮ, ದೇವಾಲಯಗಳಿಗೆ ಸೀಮಿತವಾಗಿಲ್ಲ. ಅವರು ಪತ್ರಿಕಾಗೋಷ್ಠಿ ನಡೆಸುತ್ತಾರೆ, ರಾಜಕೀಯ ಫರ್ಮಾನುಗಳನ್ನು ಹೊರಡಿಸುತ್ತಾರೆ, ಚುನಾವಣೆಗಳಲ್ಲಿ ಪ್ರಚಾರ ಮಾಡುತ್ತಾರೆ, ಸಮುದಾಯದ ಮತಗಳಿಗೆ ಪ್ರತಿಯಾಗಿ ತಮಗೆ ಬೇಕಾದ ಅನುಕೂಲತೆಗಳಿಗಾಗಿ ಆಗ್ರಹಿಸುತ್ತಾರೆ. ಇವೆಲ್ಲವೂ ಅನೈತಿಕವಷ್ಟೇ ಅಲ್ಲದೆ, ಅಸಾಂವಿಧಾನಿಕವೂ ಹೌದು.
ಭಾರತದ ಸಂವಿಧಾನ ಜಾತ್ಯತೀತತೆಯನ್ನು ಅಳವಡಿಸಿರುವುದು ಅಮೂರ್ತ ಆದರ್ಶದ ರೂಪದಲ್ಲಿ ಅಲ್ಲ ಬದಲಾಗಿ, ರಾಜ್ಯಾಡಳಿತವನ್ನು ನಿರ್ಬಂಧಿಸುವ ನೀತಿಯ ರೂಪದಲ್ಲಿ. ನಾಗರಿಕರು ತಮ್ಮ ಧರ್ಮವನ್ನು ಬೋಧಿಸುವ ಮತ್ತು ಆಚರಿಸುವ ಮುಕ್ತ ಸ್ವಾತಂತ್ರ‍್ಯ ಹೊಂದಿರುತ್ತಾರೆ, ಆದರೆ ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆಯು ಧಾರ್ಮಿಕ ಪ್ರಭಾವದಿಂದ ದೂರ ಇರಬೇಕಾಗುತ್ತದೆ. ನಾವು ಕರ್ನಾಟಕದಲ್ಲಿ ನೋಡುತ್ತಿರುವುದು ಈ ನೀತಿಯ ಸಂಪೂರ್ಣ ಪಲ್ಲಟ. ಧಾರ್ಮಿಕ ನಾಯಕರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಪ್ರಭಾವಿಸಲು ತುದಿಗಾಲಲ್ಲಿ ನಿಂತಿರುವುದೇ ಅಲ್ಲದೆ, ಭದ್ರತೆ, ತೆರಿಗೆ ವಿನಾಯಿತಿಯನ್ನೂ ಪಡೆದಿದ್ದು ಉತ್ತರದಾಯಿತ್ವದಿಂದ ಮುಕ್ತರಾಗಿದ್ದಾರೆ.
ಇನ್ನೂ ದೊಡ್ಡ ದುರಂತ ಎಂದರೆ ಸ್ವಾಮಿಗಳು ರಾಜಕೀಯ ವಲಯವನ್ನು ಪ್ರವೇಶಿಸಿದರೂ ಎಲ್ಲರ ಪರವಾಗಿ ಮಾತನಾಡುವುದಿಲ್ಲ. ಸಂಕುಚಿತ ಜಾತಿ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಾ ಅದಕ್ಕೆ ದೈವೀಕ ಮುಖವಾಡವನ್ನು ತೊಡಿಸುತ್ತಾರೆ. ಇವರ ಪಾಲ್ಗೊಳ್ಳುವಿಕೆಯು ಜಾತಿ ಆಧಾರಿತ ರಾಜಕಾರಣವನ್ನು ಬಲಪಡಿಸುವುದೇ ಅಲ್ಲದೆ, ಏಕೀಕೃತ ನಾಗರಿಕ ಅಸ್ಮಿತೆಯನ್ನು ಶಿಥಿಲಗೊಳಿಸುತ್ತದೆ. ಸುಧಾರಕರೋ ದಾರ್ಶನಿಕರೋ ಆಗಿ ಇರುವುದಕ್ಕಿಂತಲೂ ಹೆಚ್ಚಾಗಿ ಸ್ವಾಮಿಗಳು ಜಾತಿ ಪೋಷಕರಾಗಿ, ಸಾಮಾಜಿಕ ಶ್ರೇಣೀಕರಣವನ್ನು ಮತ್ತಷ್ಟು ದೃಢಪಡಿಸುತ್ತಿದ್ದಾರೆ.
ಈ ಅಪವಿತ್ರ ಧಾರ್ಮಿಕ ಗುರಗಳು ಮತ್ತು ರಾಜಕೀಯಸ್ಥರ ನಡುವಿನ ಮೈತ್ರಿಯ ಫಲಾನುಭವಿಗಳು ಯಾರು? ಸ್ಪಷ್ಟವಾಗಿ ರಾಜಕೀಯ ಪಕ್ಷಗಳು ಮತ್ತು ಆಯಾ ಜಾತಿ ಗುಂಪುಗಳು ಇದರ ಲಾಭ ಪಡೆಯುತ್ತವೆ. ಧಾರ್ಮಿಕ ನಾಯಕರ ಅನುಮೋದನೆ ಮತಬ್ಯಾಂಕುಗಳಾಗಿ ಪರಿಣಮಿಸುತ್ತವೆ. ಸ್ವಾಮಿಗಳು ಇದಕ್ಕೆ ಪ್ರತಿಯಾಗಿ, ರಾಜಕೀಯ ರಕ್ಷಣೆ, ಭೂಮಿ ಮಂಜೂರಾತಿ, ಸರ್ಕಾರಿ ಅನುದಾನ, ಸಾಮಾಜಿಕ ಸ್ಥಾನಮಾನಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಸಾರ್ವಜನಿಕರ ಪಾಡೇನು ? ಧರ್ಮವನ್ನು ತನ್ನ ಮನಶ್ಶಾಂತಿಗಾಗಿ ಆಶ್ರಯಿಸುವ ಸಾಮಾನ್ಯ ನಾಗರಿಕರು ಗೊಂದಲಕ್ಕೆ ಸಿಲುಕಿದಂತಾಗಿ, ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವುದೇ ಅಲ್ಲದೆ, ಭ್ರಮನಿರಸನಕ್ಕೊಳಗಾಗುತ್ತಾರೆ.
ಈಗ ಅಗತ್ಯವಿರುವುದು ಆತ್ಮಾವಲೋಕನ ಮತ್ತು ಪ್ರತಿರೋಧ. ನಾಗರಿಕ ಸಮಾಜವು ಈ ಅಪಾಯಕಾರಿ ಮೈತ್ರಿಯನ್ನು ವಿರೋಧಿಸಬೇಕಿದೆ. ರಾಜಕೀಯ ಪಕ್ಷಗಳು ಇಂತಹ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡುವ ಉತ್ತರದಾಯಿತ್ವವನ್ನು ಹೊರಬೇಕಿದೆ. ಬಹುಮುಖ್ಯವಾಗಿ ಧಾರ್ಮಿಕ ನಾಯಕರು ಅವರ ನಿಜವಾದ ಕರ್ತವ್ಯವನ್ನು ಮನಗಂಡು, ನೈತಿಕ ಸ್ಪಷ್ಟತೆಯನ್ನು ನೀಡಬೇಕೇ ಹೊರತು ರಾಜಕೀಯ ತಂತ್ರಗಾರಿಕೆ ಮಾಡುವುದಲ್ಲ. ಸ್ವಾಮಿಗಳು ಅಧಿಕಾರ ಕೆಂದ್ರಗಳ ದ್ವಾರಪಾಲಕರಾಗಕೂಡದು. ಧಾರ್ಮಿಕ ನಾಯಕರು ರಾಜಕೀಯದಿಂದ ದೂರವಿರುವವರೆಗೂ ಕರ್ನಾಟಕವು ಧಾರ್ಮಿಕ ಜನಪ್ರಿಯತೆಯನ್ನೇ ಅವಲಂಬಿಸಿಕೊಂಡು, ಪ್ರಜಾಪ್ರಭುತ್ವದ ಭವಿಷ್ಯವನ್ನು ಹಾಳುಮಾಡುವುದು ಖಚಿತ.

Comments
Post a Comment